Showing posts with label Kannada. Show all posts
Showing posts with label Kannada. Show all posts

Tuesday, December 17, 2013

ಈರುಳ್ಳಿ ಆಲೂಗೆಡ್ಡೆ ಪಲ್ಯ :-)

ಇವತ್ತಿಗೆ ಪಲ್ಯ ಖಾಲಿಯಾಯಿತು. ಮತ್ತೆ ತಯಾರಿಸಿದರೆ ಹೆಚ್ಚಾಗುತ್ತದೆ. ಆದ್ದರಿಂದ ಅಡುಗೆ ಮನೆಯಲ್ಲಿ ತಯಾರಿಸುವ ಬದಲು ನನ್ನ ಬ್ಲಾಗ್ ಪುಟದಲ್ಲಿ ತಯಾರಿಸುತ್ತಿದ್ದೇನೆ. ಕಂಪ್ಯೂಟರ್ನಲ್ಲಿ ಪಲ್ಯ ತಯಾರಿಸುವಾಗ ಸ್ಟೊವ್ ಎಂದು ತಿಳಿ ಅದಕ್ಕೆ ಬೆಂಕಿ ಹಚ್ಚುವ ಸಾಹಸಕ್ಕೆ ಇಳಿಯಬೇಡಿ.

ಬಹಳ ವರ್ಷಗಳ ಹಿಂದೆ, ಮಸಾಲೆ ದೋಸೆ ತಿನ್ನಲು ಹೋಟೆಲನ್ನು ಅವಲಂಭಿಸುತ್ತಿದ್ದೆ. ಏಕೆಂದರೆ ಆಲೂಗೆಡ್ಡೆ ಪಲ್ಯ ತಯಾರಿಸಲು ಬರುತ್ತಿರಲಿಲ್ಲ. ಒಂದು ಶುಭದಿನದಂದು "ಅಷ್ಟು ಸುಲಭದ ಪಲ್ಯ ಕಲಿಯಲು ನಿನಗೇನು ದಾಡಿ" ಅಂತ ಅಮ್ಮ ಜೋರು ಮಾಡಿದರು. ಇದಕ್ಕೆ ಅಪ್ಪನ ಸಪೋರ್ಟ್ ಬೇರೆ :-(. ಕಡೆಗೆ ಊರಿಗೆ ಹೋದಾಗ ಅಮ್ಮ ತಯಾರಿಸಲು ಹೇಳಿ ಕೊಟ್ಟರು. ಅರೆ ತುಂಬಾ ಸುಲಭ :-). ಆಲೂಗೆಡ್ಡೆ ಬೇಯಿಸುವುದು ಮಾತ್ರ ಸ್ವಲ್ಪ ಸಮಯದ ಕೆಲಸ [ಜೊತೆಗೆ ಕುಕ್ಕರ್ ತೊಳೆಯುವುದು :-(]. ಆದರೂ ತಿನ್ನುವಾಗ ತುಂಬಾ ಮಜ ಬರುತ್ತದೆ. ಸುಮಾರು ೩ ವರುಷದಿಂದ ನಾನೆ ಮಸಾಲೆ ದೋಸೆ ಆಸೆಯಾದಾಗ ತಯಾರಿಸುತ್ತೇನೆ :-). ದೋಸೆ ತಯಾರಿಸುವ ವಿಧಾನವನ್ನು ಸಮಯ ಸಿಕ್ಕಾಗ ಬರೆಯುತ್ತೇನೆ. ಪಲ್ಯ ತಯಾರಿಸಲು ಅಮ್ಮ ಹೇಳಿಕೊಟ್ಟ ರೆಸಿಪಿ ಇಲ್ಲಿದೆ (೩ ಮಂದಿಗೆ ಸಾಕಾಗಬಹುದು)

ಬೇಕಾಗುವ ಸಾಮಾಗ್ರಿಗಳು:


೧) ಈರುಳ್ಳಿ (ಸುಮಾರು ೩)
೨) ಆಲೂಗೆಡ್ಡೆ (ಸುಮಾರು ೫ ಸಾಧಾರಣ ಗಾತ್ರದ್ದು)
೩) ಶುಂಠಿ (ಸಣ್ಣ ತುಂಡು)
೪) ಒಗ್ಗರಣೆ ಸಾಮಾನುಗಳು (ಹಸಿಮೆಣಸು, ಘಾಟಿ ಮೆಣಸು, ಸಾಸಿವೆ, ಕಡಲೆ ಬೇಳೆ, ಕರಿಬೇವು ಸೊಪ್ಪು)
೫) ಚಿಟಿಕೆ ಅರಿಶಿನಪುಡಿ
೬) ನಿಂಬೆಹಣ್ಣು - ೧

ತಯಾರಿಸುವ ವಿಧಾನ:

ಆಲೂಗೆಡ್ಡೆಯನ್ನು ಮೊದಲೇ ತುಂಡರಿಸಿ ಬೇಯಿಸಿಡಿ. ಆಲೂಗೆಡ್ಡೆ ಬೇಯಲು ಕುಕ್ಕರಿನಲ್ಲಿ ೩ ವಿಶಲ್ ಸಾಕಾಗುತ್ತದೆ. ಹಾಗೆ ಈರುಳ್ಳಿಯನ್ನು ತುಂಡರಿಸಿಡಿ.

ಮೊದಲು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪವನ್ನು ಸುರಿಯಿರಿ. ನಂತರ ಅದಕ್ಕೆ ಹಂತಹಂತವಾಗಿ ಸಾಸಿವೆ, ಕಡಲೆಬೇಳೆ, ಹಸಿಮೆಣಸು, ಘಾಟಿ ಮೆಣಸು ಮತ್ತು ಕರಿಬೇವು ಸೊಪ್ಪನ್ನು ಸೇರಿಸಿ ಚೆನ್ನಾಗಿ ಕರಿಯಿರಿ. ಮಿಶ್ರಣ ಕಪ್ಪಾಗದಂತೆ ನೋಡಿಕೊಳ್ಳಿ. ನಂತರ ಅದಕ್ಕೆ ತುಂಡರಿಸಿದ ಈರುಳ್ಳಿ ಯನ್ನು ಸೇರಿಸಿ ಮಿಶ್ರಣವನ್ನು ಹದವಾಗಿ ಕರಿಯಿರಿ. ಈರುಳ್ಳಿಯ ಬಣ್ಣ ಸ್ವಲ್ಪ ಬದಲಾದ ನಂತರ ಅದಕ್ಕೆ ನೀರನ್ನು ಸೇರಿಸಿ. ಹೆಚ್ಚು ನೀರನ್ನು ಸೇರಿಸಿದರೆ ಪಲ್ಯ ಮೆತ್ತಗಾಗುತ್ತದೆ. ಬೇಕಾದಷ್ಟೆ ಸೇರಿಸಿ. ಇದೇ ಮಿಶ್ರಣಕ್ಕೆ ಸ್ವಲ್ಪ ಅರಿಶಿನ ಜೊತೆಗೆ ಬೇಕಾಗುವಷ್ಟು ಉಪ್ಪನ್ನು ಸೇರಿಸಿ.  ೧೦ ನಿಮಿಷ ಈರುಳ್ಳಿ ಬೆಂದ ನಂತರ ಅದಕ್ಕೆ ಬೇಯಿಸಿದ ಆಲೂಗೆಡ್ಡೆಯನ್ನು ಸೇರಿಸಿ. ಆಲೂಗೆಡ್ಡೆಯನ್ನು ಹಿಚುಕಿ ನಂತರ ಬಾಣಲಿಗೆ ಸೇರಿಸಿ ಮಿಶ್ರಣವನ್ನು ಚೆನ್ನಾಗಿ ಕಲಸಿ. ಸ್ವಲ್ಪ ಹೊತ್ತು ಸಿಮ್ಮಿನಲ್ಲಿ ಬೇಯಿಸಿ ನಂತರ ಅದಕ್ಕೆ ನಿಂಬೆಹಣ್ಣನ್ನು ಹಿಂಡಿದರೆ ರುಚಿಕರವಾದ ಪಲ್ಯ ತಯಾರು. ಇದನ್ನು ದೋಸೆ ಅಥವಾ ಚಪಾತಿ ಜೊತೆಗೆ ಕೂಡ ತಿನ್ನಬಹುದು.




ಕೊನೆ ಹನಿ:

೧) ಶುಂಠಿ ಆಪ್ಶನಲ್ ಆದರೂ ಬಹಳ ಇಂಪಾರ್ಟೆಂಟ್. ಇದು ಆಲೂಗೆಡ್ಡೆಯ ಅಡ್ಡ ಪರಿಣಾಮವನ್ನು ತಡೆಯುತ್ತದೆ ;-)
೨) ದೊಡ್ಡಕ್ಕ ತುಂಬಾ ಚೆನ್ನಾಗಿ ತಯಾರಿಸುತ್ತಾರೆ. ನಾನು ತಯಾರಿಸುವ ಪಲ್ಯದ ರುಚಿ ಇನ್ನು ಅವರ ಮಟ್ಟಕ್ಕೆ ತಲುಪಿಲ್ಲ.
೩) ಹಾಗೆ ಒಗ್ಗರಣೆಗೆ ಶೇಂಗಾ ಕೂಡ ಸೇರಿಸಬಹುದು ಆದರೆ ಆಲೂಗೆಡ್ಡೆ ಜೊತೆಗೆ ಸೇರಿ ಅಡ್ಡ ಪರಿಣಾಮದ ಜುಗಲ್-ಬಂದಿ ಆಗುತ್ತದೆ :-)
೪) ಈರುಳ್ಳಿ ತುಂಡರಿಸುವಾಗ ದಳದಳ ಅಂತ ಕಣ್ಣೀರು ಸುರಿದರೆ ಅಣ್ಣಾವ್ರು ಹೇಳಿದ "ಕಣ್ಣೀರಧಾರೆ ಇದೇಕೆ" ಹಾಡನ್ನು ಕೇಳಿ ಅಥವಾ ನೀವೆ ಹಾಡಿ ;-) [ಶುಭಪಂತುವರಾಳಿ ರಾಗದಲ್ಲಿರುವ ಹಾಡನ್ನು ಇಲ್ಲಿ ಕೇಳಿ ಅಣ್ಣಾವ್ರ ಕ್ಷಮೆ ಕೇಳುತ್ತಾ]. ಇಲ್ಲದಿದ್ದರೆ ಕೆಳಗೆ ಬರೆದಿರುವ ನನ್ನ ರಿಮೇಕ್ ಕೂಡ ಹಾಡಬಹುದು ;-)
"ಕಣ್ಣೀರಧಾರೆ ಇದೇಕೆ ಇದೇಕೆ
ಪಲ್ಯದ ಈರುಳ್ಳಿಯೆ ಈ ಪರಿಯ ಕೋಪವೇಕೆ"
೫) ದೋಸೆಗೆ ಚಟ್ನಿ ತಯಾರಿಸುವ ವಿಧಾನವನ್ನು ಇಲ್ಲಿ ಬರೆದಿದ್ದೇನೆ.

ಹಾಗೆಯೇ ಈ ತಿಂಗಳ ೨ ನೇ ವಾರದಂದು ನನ್ನ ಬ್ಲಾಗ್ ೪ನೇ ವರುಷಕ್ಕೆ ಕಾಲಿಟ್ಟಿದೆ. ತುಂಬಾ ಸಂತೊಷವಾಗುತ್ತದೆ ಅಷ್ಟು ವರುಷದಿಂದ ಬರೆಯುತ್ತೇನೆಂಬುದನ್ನು ತಿಳಿದು. ೧೦೦ ಕ್ಕು ಹೆಚ್ಚು ಬ್ಲಾಗ್ ಲೇಖನಗಳನ್ನು ಬರೆದಿದ್ದೇನೆ. ಬಹಳಷ್ಟು ಮಂದಿ ಪ್ರಶಂಸಿಸಿದ್ದಾರೆ ಹಾಗೆ ಕೆಲವರು ತಿದ್ದಿದ್ದಾರೆ ಕೂಡ.  ಹಾಗೆ ಬರೆಯಲು ಇನ್ನು ಬಹಳಷ್ಟು ಬಾಕಿ ಇದೆ. ಆದರೆ ಸಮಯದ ಅಭಾವದಿಂದ ಬರೆಯಲು ಸಾಧ್ಯವಾಗುತ್ತಿಲ್ಲ. ಇನ್ನೆರಡು ವಾರ ಏನೂ ಬರೆಯಲು ಸಾಧ್ಯವಿಲ್ಲವೇನೋ. ೪ವರ್ಷದ ನನ್ನ ಅನುಭವಗಳನ್ನು. ಪ್ರತ್ಯೇಕ ಪುಟದಲ್ಲಿ ಗೀಚುತ್ತೇನೆ. ಸಂತೋಷದ ವಿಷಯವೆಂದರೆ ನನ್ನ ಬ್ಲಾಗ್ ವೀಕ್ಷಕರಲ್ಲಿ ಸುಮಾರು ೯೫% ಮಂದಿ ಗೂಗಲ್ ಸರ್ಚ್ ನಿಂದ ಬಂದವರು. ಇದರಿಂದ ನನ್ನ ಬ್ಲಾಗ್ ಪುಟಕ್ಕೆ ವೀಕ್ಷಕರ ಕೊರತೆ ಇರುವುದಿಲ್ಲ ಕೂಡ :-). ಈ ದಿನದಂದು ನನ್ನ ಎಲ್ಲಾ ಒದುಗರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

Wednesday, December 4, 2013

ತೆಂಗಿನಕಾಯಿ ಚಟ್ನಿ

ದೋಸೆ ಜೊತೆಗೆ ಚಟ್ನಿ ಇಲ್ಲದಿದ್ದರೆ ಏನೋ ಮಿಸ್ ಆದಂತೆ ಅಲ್ವೆ ;-). ನನಗೂ ಕೂಡ ಹಾಗೆ. ದೋಸೆ ಜೊತೆಗೆ ಎಷ್ಟೇ ಕಷ್ಟವಾದರೂ ಚಟ್ನಿ ಬೇಕೆ ಬೇಕು. ಅದಕ್ಕೆ ತಂದೆ ತಿಂಡಿಪೋತ ಅಂತ ಕರೆಯುವುದೂ ಉಂಟು ;-). ಹಾಗೆಯೇ ತಯಾರಿಸುವುದು ಕೂಡ ಬಹಳ ಸುಲಭ. ನಾನು ತಯಾರಿಸುವ ವಿಧಾನವನ್ನು ಇಲ್ಲಿ ಬರೆದಿದ್ದೇನೆ (ಅಮ್ಮ ಹೇಳಿಕೊಟ್ಟಿದ್ದು)

ಬೇಕಾಗುವ ಸಾಮಾಗ್ರಿಗಳು:

೧) ತೆಂಗಿನಕಾಯಿ ತುರಿ (ಅರ್ಧ ತೆಂಗಿನಕಾಯಿಯದ್ದು)
೨) ಸ್ವಲ್ಪ ಹುರಿಗಡಲೆ
೩) ಹಸಿ ಮೆಣಸಿನಕಾಯಿ
೪) ಸ್ವಲ್ಪ ಹಿಂಗು
೫) ನೆನೆಸಿದ ಹುಣಸೆಹಣ್ಣು
೫) ಒಗ್ಗರಣೆ ಸಾಮಾಗ್ರಿಗಳು: ಸಾಸಿವೆ, ಉದ್ದಿನಬೇಳೆ, ಕರಿಬೇವು ಸೊಪ್ಪು, ಬ್ಯಾಡಗಿ ಮೆಣಸು.


ತೆಂಗಿನಕಾಯಿ ಚಟ್ನಿ
ತಯಾರಿಸುವ ವಿಧಾನ:

ಮೊದಲು ತುರಿದ ತೆಂಗಿನಕಾಯಿಯನ್ನು ಮಿಕ್ಸಿ ಜಾರಿನಲ್ಲಿ ಸುರಿಯಿರಿ. ನಂತರ ಅದಕ್ಕೆ ಹುರಿಗಡಲೆ, ನೆನೆಸಿದ ಹುಣಸೆಹಣ್ಣು, ಹಸಿ ಮೆಣಸು, ಹಿಂಗು ಮತ್ತು ಬೇಕಾಗುವಷ್ಟು ಉಪ್ಪನ್ನು ಸೇರಿಸಿ. ಈ ಮಿಶ್ರಣಕ್ಕೆ ಹದವಾಗಿ ನೀರನ್ನು ಸೇರಿಸಿ, ಮಿಕ್ಸಿಯಲ್ಲಿ ರುಬ್ಬಿ. ಮೊದಲು ನೀರನ್ನು ಕಡಿಮೆ ಸೇರಿಸಿ ನಂತರ ಬೇಕಾಗುವಷ್ಟು ಸೇರಿಸಿ ಮಿಶ್ರಣ ಸಣ್ಣಗಾಗುವವರೆಗೆ ರುಬ್ಬಿ. ರುಬ್ಬಿದ ನಂತರ, ಮಿಶ್ರಣವನ್ನು ಸಣ್ಣ ಪಾತ್ರೆಗೆ ಸುರಿಯಿರಿ. ಇದಾದ ಬಳಿಕ ಸಾಸಿವೆ, ಉದ್ದಿನಬೇಳೆ, ಕರಿಬೇವು ಸೊಪ್ಪು ಮತ್ತು ಬ್ಯಾಡಗಿ ಮೆಣಸಿನ ಒಗ್ಗರಣೆ ತಯಾರಿಸಿ. ಒಗ್ಗರಣೆಯನ್ನು ಮಿಶ್ರಣಕ್ಕೆ ಸೇರಿಸಿದ ನಂತರ ಆಹಾ ರುಚಿಯಾದ ಚಟ್ನಿ ತಯಾರು. ಚಟ್ನಿಯನ್ನು ದೋಸೆಯೊಂದಿಗೆ ತಿಂದು ಆನಂದಿಸಿ. ಹಾಗೆ ದೋಸೆ ತಿಂದ ನಂತರ ನಿದ್ದೆ ಹೋಗಬೇಡಿ ;-).

ಚಟ್ನಿಗೆ ಕೆಲವರು ಕೊತ್ತಂಬರಿ ಸೊಪ್ಪು ಸೇರಿಸಿ ಕೂಡ ರುಬ್ಬುತ್ತಾರೆ. ಇದರಿಂದ ಅದರ ರುಚಿ ಮತ್ತಷ್ಟು ವೃದ್ಧಿಸುವುದು ಕೂಡ! ಹಾಗೆ ಮಿಶ್ರಣಕ್ಕೆ ಸಣ್ಣ ತುಂಡು ಶುಂಠಿ ಕೂಡ ಸೇರಿಸಿ ರುಬ್ಬಬಹುದು. ಹುರಿಗಡಲೆ ಆಪ್ಶನಲ್. ಹೆಚ್ಚು ಸೇರಿಸಿದರೆ ಚಟ್ನಿ ಸಿಹಿಯಾಗುತ್ತದೆ :-). ಹಾಗೆ ಹೆಚ್ಚು ಖಾರ ಬೇಕೆಂದರೆ ಒಂದೆರಡು ಎಕ್ಸ್ಟ್ರಾ ಹಸಿ ಮೆಣಸನ್ನು ಸೇರಿಸಿ.

Monday, December 2, 2013

ಚಾಮುಂಡಿ ಎಕ್ಸ್-ಪ್ರೆಸ್ ರೈಲಿನಲ್ಲಿ ಮೂರು ಘಂಟೆ

ಇದು ಕೂಡ ನನ್ನ ಹಳೆಯ ಬರಹ. ಸುಮಾರು ನಾಲ್ಕು ವರ್ಷದ ನಂತರ ಇಲ್ಲಿ ಸೇರಿಸಿದ್ದೇನೆ. ರೈಲಿನಲ್ಲಿ ಸಾಕಷ್ಟು ಅನುಭವಗಳಾಗಿವೆ.  ಅದರಲ್ಲಿ ಇದು ಕೂಡ ಒಂದು. ರೈತರ ಕಷ್ಟಗಳನ್ನು ಕಂಡಾಗ ಬೇಸರವಾಗುತ್ತದೆ. ಅದಕ್ಕೆ ಈ ಅನುಭವವನ್ನು ಗೀಚುವ ಮನಸ್ಸಾಯಿತು.

ಏಪ್ರಿಲ್ ೧೨, ೨೦೦೯,

ಬೆಂಗಳೂರಿನಲ್ಲಿ ಕಾರ್ಯಕ್ರಮ ಇದ್ದರಿಂದ ಸಂಜೆ ಹೊರಡುವ ಬದಲು ಬೆಳಿಗ್ಗೆ ೬:೪೫ಕ್ಕಿರುವ ಮೈಸೂರು-ಬೆಂಗಳೂರು ಚಾಮುಂಡಿ ಎಕ್ಸ್ಪ್ರೆಸ್ಸ್ ರೈಲು ಹತ್ತಿದೆ. ಹಿಂದಿನ ದಿನವೇ ಚೀಟಿ ತೆಗೆದುಕೊಂಡಿದ್ದರಿಂದ ಸೀದಾ ರೈಲು ಹತ್ತಿದೆ. ಮೊದಮೊದಲಿಗೆ ಜನ ಇಲ್ಲದಿದ್ದರೂ ನಂತರ ರೈಲು ತುಂಬಿಹೋಯಿತು. ನನ್ನ ಎದುರು ಒಬ್ಬ ೪೦ ವರುಷದ ವ್ಯಕ್ತಿಯೊಬ್ಬರು ಕುಳಿತಿದ್ದರು. ಇನ್ನೆನು ರೈಲು ಹೊರಡಬೇಕೆನ್ನುವಷ್ಟರಲ್ಲಿ ಯಾರೊ ಒಬ್ಬರು ಬಂದು ಮುಂದಿನ ಆಸನದಲ್ಲಿ ಕುಳಿತಿದ್ದ ವ್ಯಕ್ತಿಯನ್ನು "ಇದು ರಿಸೆರ್ವ್ಡ್ ಸೀಟ್, ನೀವು ಏಳಿ" ಎಂದರು. ಆ ವ್ಯಕ್ತಿಗೆ ಸಿಕ್ಕಾಪಟ್ಟೆ ಕೋಪ ಬಂತು. "ಅಲ್ಲಯ್ಯ ಸುಮಾರ್ ವರ್ಷದಿಂದ ಇದೇ ರೈಲಲ್ಲಿ ಹೋಗ್ತಾ ಇದೀನಿ, ನೀನು ರಿಸೆರ್ವ್ಡ್ ಅಂತ ಜಗಳಕ್ಕೆ ಇಳಿತಿಯಲ್ಲಾ. ರಿಸೆರ್ವ್ಡ್ ಬೋಗಿ ಕಡೆಗಿರೋದು. ಬೇಕಾದರೆ ಟಿಟಿಇ ವಿಚಾರಿಸು" ಎಂದು ಜೋರು ಮಾಡಿದನು. ಸರಿ ರಿಸರ್ವ್ಡ್ ಚೀಟಿ ಇದ್ದವನು ಹೊರಕ್ಕೆ ಹೋಗಿ ಟಿಟಿಇ ವಿಚಾರಿಸಿದಾಗ, ರಿಸೆರ್ವ್ಡ್ ಬೋಗಿ ಬೇರೆ ಎಂದು ಹೇಳಿದನು. ಇದು ಮುಂದಿದ್ದ ವ್ಯಕ್ತಿಗೂ ತಿಳಿಯಿತು. ಸ್ವಲ್ಪ ಹೊತ್ತಿನ ನಂತರ ಅಲ್ಲಿದ್ದವರಲ್ಲಿ "ಸುಮಾರು ವರ್ಷದಿಂದ ಇದೇ ರೈಲ್ನಾಗೆ ಹೋಗ್ತಿವ್ನಿ. ಅಲ್ಲಾ ರಿಸೆರ್ವ್ಡ್ ಅಂತ ಜಗಳಕ್ಕೆ ಇಳಿತಾರೆ. ನಾವು ಸ್ವಲ್ಪ ಕಮ್ಮಿ ಒದೋರ್ತರ ಕಂಡ್ರು ಜಾಸ್ತಿ ದುಡ್ ಕೊಟ್ಟು ಹೋಗೊರ್ಗೆ ಈತರ ಮೋಸ ಮಾಡಲ್ಲ. ಇವ್ರು ಬಿಹಾರದ ಕಡೆ ಮಂದಿನ ನೋಡ್ಲಿ. ಅಲ್ಲಿ ರಿಸೆರ್ವ್ಡ್ ಅಂತ ಇದ್ರು ಅಲ್ಲಿನ್ ಜನ ದಬಾಯ್ಸಿ ಸುಮ್ನೆ ಆಚಿಕ್ಕೆ ಕಳಿಸ್ತಾರೆ" ಎಂದು ತನ್ನ ಬೇಸರ ವ್ಯಕ್ತಪಡಿಸಿದನು. ಹಾರ್ನ್ ಮಾಡುತ್ತಾ ನಿಗದಿತ ಸಮಯಕ್ಕೆ ರೈಲು ಹೊರಡಿತು.

ಪಾಂಡವಪುರದಲ್ಲಿ ಈ ರೈಲಿಗೆ ನಿಲುಗಡೆಯಿದೆ. ಅಲ್ಲಿಯೊಬ್ಬರು ರೈತರು ರೈಲನ್ನು ಹತ್ತಿದರು. ನಮ್ಮ ಬಳಿ ಆಸನ ಇದ್ದರಿಂದ ಅಲ್ಲಿಯೇ ಕುಳಿತುಕೊಂಡರು. ಅವರು ಕೆಂಗೇರಿಗೆ ಹೋಗುವವರು. ಸ್ವಲ್ಪ ಸಮಯದ ನಂತರ ಮುಂದಿರುವ ವ್ಯಕ್ತಿ ಆ ರೈತರ ಬಳಿ ಮಾತಿಗೆ (ಸೌಹಾರ್ದ) ಇಳಿದನು.

ವ್ಯಕ್ತಿ: ಎಲ್ಲಿ ಗೌಡ್ರೇ ನಿಮ್ ಊರು, ಏನ್ ಮಾಡ್ಕೊಂಡಿದ್ದಿರಾ? (ಮಾತ್ರೆ ನುಂಗುತ್ತಾ)
ರೈತ: ಪಾಂಡವಪುರ ಪಕ್ಕ ಕಣಪ್ಪ. ನೋಡ್ದಾಗ ತಿಳಿಯಕ್ಕಿಲ್ವ ರೈತ ಅಂತ (ಬಿಳಿ ಶಾಲು, ಬಿಳಿ ಪಂಚೆ). ಅದೇನಪ್ಪ ನೀರಿಲ್ದೆ ಮಾತ್ರೆ ನುಂಗ್ತಾ ಇದಿಯಲ್ಲ?

ಲಗ್ಗೇಜ್ ರ್ಯಾಕ್ ನಿಂದ ನೀರಿನ ಬಾಟಲ್ ಎತ್ತುತ್ತಾ

ವ್ಯಕ್ತಿ: ಇಲ್ಲ ಗೌಡ್ರೇ ತಂದಿದ್ದೀನಿ ನೋಡಿ
ರೈತ:
ಬಹಳ ಬುದ್ಧಿವಂತ ಕಣಪ್ಪ ನೀನು.

ಬಿಸಿ ಬಿಸಿ ಮಸಾಲೆ ದೋಸೆ, ರೈಸ್ ಬಾತ್, ಇಡ್ಲಿ-ವಡ, ಕೇಳಿತು ರೈಲಿನಲ್ಲಿ ತಿಂಡಿ ಮಾರುವವನ ಧ್ವನಿ. ಇತ್ತೀಚಿಗೆ ನಡೆದ ಕೆಲವು ಘಟನೆಗಳಿಂದಾಗಿ ಸಮವಸ್ತ್ರ ಇಲ್ಲದವರ ಬಳಿ ಪ್ರಯಾಣಿಕರು ತಿಂಡಿ ತೆಗೆದುಕೊಳ್ಳುವುದಿಲ್ಲ. ಅಕ್ಕ ಬಿಸಿ-ಬಿಸಿ ರುಚಿಯಾದ ದೋಸೆ ಮಾಡಿಕೊಟ್ಟಿದ್ದರಿಂದ ನಾನೇನು ತೆಗೆದುಕೊಳ್ಳಲಿಲ್ಲ.

ವ್ಯಕ್ತಿ: ಒಂದು ಮಸಾಲೆ ದೋಸೆ ಕೊಡಯ್ಯ. ಎಷ್ಟಪ್ಪ
ದೋಸೆ ಮಾರುವವ: ತಗೊಳ್ಳಿ ಸಾರ್. ಹತ್ತು ರುಪಾಯಿ

ಮಸಾಲ ದೋಸೆ ಪೊಟ್ಟಣ ತೆರೆಯುತ್ತ ಗೌಡರತ್ತ ಮುಖ ಮಾಡಿದನು.

ವ್ಯಕ್ತಿ:  ನೋಡಿ ಗೌಡ್ರೆ. ಎಷ್ಟು ಕಮ್ಮಿ ಚಟ್ನಿ ಹಾಕವ್ನೇ. (ದೋಸೆ ಮಾರುವವನ ಬಳಿ) ಏನಯ್ಯಾ ಚಟ್ನಿನೇ ಇಲ್ವಲ್ಲಯ್ಯಾ?
ದೋಸೆ ಮಾರುವವ: ಗಟ್ಟಿ ಚಟ್ನಿ ಸಾರ್. ಹತ್ತು ರುಪಾಯ್ಗೆ ಅಷ್ಟೆ ಬರೋದು
ವ್ಯಕ್ತಿ: ನೋಡಿ ಗೌಡ್ರೆ ಇವ್ರೂ ಹಿಂಗಾಡ್ತಾರೆ

ದೋಸೆ ತಿಂದ ನಂತರ...

ವ್ಯಕ್ತಿ: ಏನ್ ಗೌಡ್ರೇ, ಯಡಿಯೂರಪ್ಪನವ್ರು ನಿಮ್ಗೆ ಫ್ರೀಯಾಗಿ ಕರೆಂಟ್ ಕೊಟ್ಟವ್ರೆ. ಖರ್ಚ್ ತುಂಬಾ ಇಳಿದಿರ್ಬೇಕಲ್ವ
ರೈತ: ಹೆಸ್ರಿಗೆ ಮಾತ್ರ ಬಿಟ್ಟಿ ಕಣಪ್ಪ. ಯಾವಗ್ ನೋಡಿದ್ರೂ ಸಿಂಗಲ್ ಫೇಸ್. ನೀನೆ ಹೇಳು ಗದ್ದೆ ಮೋಟಾರ್ಗೆ ಸಿಂಗಲ್ ಫೇಸ್ ಸಾಕಾಯ್ತದ. ಮೂರು ಫೇಸ್ ಸರಿ ಮಾಡ್ಸೋಕೆ ಕರೆಂಟ್ನವ್ರಿಗೆ ಸ್ವಲ್ಪ ಕೊಡ್ಲಿಲ್ಲಾಂದ್ರೆ ಏನ್ ಕೆಲ್ಸನೂ ಆಗಲ್ಲ ಕಣಪ್ಪ. ಪುಣ್ಯಕ್ಕೆ ಕಾಲುವೆ ನೀರು ಇದ್ಯಲ್ಲ ಅದ್ರಿಂದ ಸ್ವಲ್ಪ ಸುಧಾರ್ಸ್ಕೊತೀವಿ. ಈ ರೈತರ ಪಾಡು ನಿಂಗೆ ತಿಳಿಯಾಕ್ಕಿಲ್ಲ

ವ್ಯಕ್ತಿ: ಹೌದಾ ಗೌಡ್ರೆ!! ಅಂದ ಹಾಗೆ ನಿಮ್ದೆಷ್ಟು ಜಮೀನ್ ಅಯ್ತೆ. ಏನ್ ಬೆಳೆಸ್ತೀರಾ
ರೈತ: ಮೂರು ಎಕ್ರೆ ಕಣಪ್ಪಾ. ಭತ್ತ ಬೆಳಿತೀವಿ

ವ್ಯಕ್ತಿ: ಒಳ್ಳೆ ಬೆಳೆ ಬರುತ್ತಾ ಹೇಗೆ? ಈಗೀಗ ಅಕ್ಕಿ ಕೂಡ ಬಾಳ ಕಾಸ್ಲಿಯಾಗೈತೆ ಅಲ್ವಾ, ತುಂಬಾ ಸಂಪಾದನೆಯಾಗುತ್ತನ್ನಿ
ರೈತ: ಹಾಗೇನೂ ಇಲ್ಲ ಕಣಪ್ಪ. ಕಾಸ್ ಮಾಡೋರು ದಲ್ಲಾಳಿಗಳು ಮಾತ್ರ. ನಮ್ಗೆ ಇನ್ನು ಅದೇ ಹಳೇ ರೇಟೆ ಹೇಳ್ತಾರೆ. ಗದ್ದೆ ಮಾಡೋದು ಸುಲ್ಭ ಅನ್ಕೊಡಿದ್ದಿಯಾ. ಮೊನ್ನೆ ನಮ್ ಭತ್ತಕ್ಕೆ ಸುಳಿ ರೋಗ ಬಂದಿತ್ತು. ಈತರ ರೋಗ ಬಂದ್ರೆ ನಮ್ ಬೆಳೆ ಎಲ್ಲಿ ನಿಲ್ತಾವೆ ಹೇಳು. ಗದ್ದೆ ಕೆಲ್ಸ ಮಾಡೋಕೆ ಜನ ಸಿಗ್ಬೇಕಲ್ಲ

ವ್ಯಕ್ತಿ: ನೀವು ರೈತ್ರು ಅದೇನೊ ಕೆಮಿಕಲ್ ಎಲ್ಲಾ ಹಾಕಿ ನಾವು ತಿನ್ನೊರಿಗೂ ಕಾಯ್ಲೆ ಬರಿಸ್ತೀರಾ ಅಲ್ವಾ. ಮುಂಚೆ ಕೆಮಿಕಲ್ ಬದ್ಲು ಬೇವಿನ್ ನೀರು ಬಳಸ್ತಾ ಇದ್ರು
ರೈತ: ಮೊನ್ನೆ ಸುಳಿ ರ‍ೋಗ ಬಂದಾಗ ನಾವು ಕೃಷಿ ಇಲಾಖೆಯವ್ರನ್ನು ಕೇಳ್ದ್ವಿ. ಅವ್ರು ಯಾವ್ದೊ ಹೊಸ ಗೊಬ್ರ ತೋರ್ಸಿದ್ರು. ಎರಡು ಸಲ ಹಾಕುದ್ರೂನೂ ರೋಗನೇ ಇಳಿತಾ ಇಲ್ಲ. ಅದಾದ್ ಮ್ಯಾಕೆ ನೀವ್ ಹೇಳುದ್ರಲ್ಲ ಅದನ್ನೇ ಬಳಸ್ದೆ. ಸ್ವಲ್ಪ ದಿನ್ದಲ್ಲೇ ರ‍ೋಗ ಮಾಯ್ವಾಯ್ತು

ವ್ಯಕ್ತಿ: ಅಲ್ಲಾ ಗೌಡ್ರೆ, ಕೆಲ್ಸಕ್ಕೆ ಆಳು ಯಾಕೆ ಈಗ ಮೆಶಿನ್ ಬಂದಿದ್ಯಲ್ಲಾ
ರೈತ: ಹೂ ಕಣಪ್ಪಾ ಬಂದಿದೆ. ಅದಕ್ಕೂ ಕರ್ಚಿದೆ. ಭತ್ತ ಕಟಾವು ಮಾಡೊವಾಗ ಭತ್ತ ಏನೋ ಬೇಗ ಸಿಗುತ್ತೆ ಆದ್ರೆ ಅದ್ರ ಹುಲ್ಲು ಎಲ್ಲಾ ಪುಡಿಯಾಗುತ್ತಪ್ಪಾ. ಸುಮ್ನೆ ದಂಡ ಆಗುತ್ತೆ.

ವ್ಯಕ್ತಿ: ನಿಮ್ಗೆ ಭತ್ತ ಸಿಕ್ರೆ ಸಾಕಲ್ವ ಹುಲ್ಲು ಯಾಕೆ
ರೈತ: ಏಏಏ.. ಅಷ್ಟು ಗೊತ್ತಿಲ್ವೇನ್ಲಾ. ಒಣಗಿದ ಹುಲ್ಲುಗಳು ನಮ್ ಹಸುಗಳಿಗೆ ಆಹಾರ ಕಣ್ಲಾ. ಅದ್ರಲ್ಲೂ ಒಂದು ಗದ್ದೆ ಹುಲ್ನಿಂದ ೨೦೦೦ ರುಪಾಯಿ ಆದಾಯ ಕೂಡ ಬರುತ್ತೆ

ವ್ಯಕ್ತಿ: ಹೌದಾ ಗೌಡ್ರೆ. ಕೂಲಿ ಎಷ್ಟ್ ಕೊಡ್ಬೆಕಾಯ್ತದೆ
ರೈತ: ಕೂಲಿ ೬ ಜನ ಬೇಕಾಯ್ತದೆ. ಅವ್ರಿಗೆ ಕಟಾವು ಮಾಡಕ್ಕೆ ಒಬ್ಬೊಬ್ರಿಗೆ ೧೦೦೦ ಹಿಡಿಯುತ್ತೆ ಕಣಪ್ಪಾ

ವ್ಯಕ್ತಿ: ನೀವೆ ಕಟಾವು ಮಾಡ್ಬಹುದಲ್ಲಾ?
ರೈತ: ೩ ಎಕ್ರೆ ಕಟಾವು ಮಾಡೋದು ಸುಲ್ಭ ಅನ್ಕೊಡಿದ್ದೀಯಾ. ಅದ್ರಲ್ಲೂ ಮಧ್ಯ ಮಳೆ-ಗಿಳೆ ಬಂದ್ರೆ ಬೆಳೆನೂ ಹೊಂಟೋಯ್ತದೆ ಗೊತ್ತಾ

ವ್ಯಕ್ತಿ: ಮಳೆ ಬಂದ್ರೆ ಮುಂದಿನ ದಿನ ಒಣಗಕ್ಕ ಬಿಟ್ರೆ ಆಯ್ತಲ್ವಾ?
ರೈತ: ಒಂದ್ಸಲ ನೀರ್ ಬಿದ್ರೆ ಮುಗ್ದೋಯ್ತು ಕಣಪ್ಪ. ಇನ್ನು ಅದು ಬರಿ ಮೇವಿಗೆ ಹುಲ್ಲು ಅಷ್ಟೇ (ಬೇಸರದಿಂದ)

ವ್ಯಕ್ತಿ: ಒಂದ್ಸಲ ಬೆಳೆ ತೆಗುದ್ರೆ ಎಷ್ಟು ಇಳುವರಿ ಬರುತ್ತೆ ನಿಂಗೆ
ರೈತ: ಒಂದ್ಸಲಕ್ಕೆ ೪೦ ಮೂಟೆ ಬರುತ್ತೆ ಕಣಪ್ಪ ಅದು ಯಾವ ರೋಗ ಬರ್ದೇ ಇದ್ರೆ. ಒಂದು ಮೂಟೆ ೭೦ ಕೆ.ಜಿ ಲೆಕ್ಕ. ಅದ್ರಲ್ಲೂ ಕೂಲಿ ಕರ್ಚೆ ಜಾಸ್ತಿ

ಅಷ್ಟೊತ್ತಿಗಾಗಲೆ ಮಂಡ್ಯ ಬಂದಿತ್ತು. ಇಬ್ಬರಿಗೂ ನಿದ್ದೆ ಬರುತ್ತಿತ್ತೇನೊ, ನಿದ್ರಾದೇವಿಗೆ ಶರಣಾದರು. ರೈಲು ಬಹಳ ವಿಳಂಬವಾಗಿತ್ತು. ದ್ವಿಪಥ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ಹಲವೆಡೆ ಕ್ರಾಸಿಂಗ್ ತೊಂದರೆ. ಎಲ್ಲಾ ಕಡೆ ಇವನೇ ನಿಲ್ಲಿಸುತ್ತಿದ್ದ. ಬ್ಯಾಟರಾಯನಹಳ್ಳಿ, ಹನಕೆರೆ, ಶೆಟ್ಟಿಹಳ್ಳಿ ಹೀಗೆ ಮೂರು ಬಾರಿ ಹತ್ತು ನಿಮಿಷ ಕ್ರಾಸಿಂಗ್. ಒಟ್ಟು ೩೦ ನಿಮಿಷ ಸಮಯ ವ್ಯರ್ಥ. ಎಲ್ಲರೂ ತಲೆಕೆರೆದುಕೊಳ್ಳುತ್ತಿದ್ದರು. ರೈಲು ಕೂಡ ಬಹಳ ರಶ್ ಇತ್ತು. ಮೈಸೂರಿನಿಂದ-ಮದ್ದೂರು ವರೆಗಿನ ಪ್ರಯಾಣ ಬಹಳ ಸಂತಸ ನೀಡಿತ್ತು. ಸಣ್ಣ ಕಾಲುವೆಗಳು, ಭತ್ತದ, ತೆಂಗಿನ, ಕಬ್ಬಿನ ತೋಟ, ಆಗಾಗ ಸಿಗುತ್ತಿದ್ದ ಮಾವಿನ ತೋಟಗಳು ಮನಸ್ಸಿಗೆ ಉಲ್ಲಾಸ ನೀಡುತ್ತವೆ. ರಾಮನಗರದ ನಂತರ ಸಂಪೂರ್ಣ ಡಬಲ್ ಟ್ರಾಕ್. ರಾಮನಗರ-ಚನ್ನಪಟ್ಟಣ ಮಾರ್ಗದಲ್ಲಿ ತುಸು ವೇಗವಾಗಿಯೆ ಕಾಮಗಾರಿಗಳು ನಡೆಯುತ್ತಿವೆ. ಬ್ರಿಡ್ಜ್ಗಳು, ಟ್ರ್ಯಾಕ್ ಗಳನ್ನು ಬೇಗನೆ ಮುಗಿಸಿದ್ದಾರೆ. ಕೆಲವು ಕಡೆ ಎತ್ತರದ ಪ್ರದೇಶದಲ್ಲಿ ಮಣ್ಣು ತೆಗೆಯುವ ಕಾಮಗಾರಿ ನಡೆಯುತ್ತಿದೆ. ರಾಮನಗರದ ನಂತರ ರೈಲು ತುಸು ವೇಗವಾಗಿ ಹೋಗಬಹುದು ಎಂದುಕೊಂಡರೆ ಸಿಂಗಲ್ ಟ್ರಾಕ್ ಗಿಂತ ನಿಧಾನವಾಗಿ ಚಲಿಸುತ್ತಿತ್ತು. ಹೊಸ ಟ್ರಾಕ್ ಅಲ್ಲವೇ ಸ್ವಲ್ಪ ಸೆಟ್ ಆಗಲಿ ಅಂತ ತಿಳಿದುಕೊಳ್ಳಬೇಡಿ. ಇದೇ ಟ್ರಾಕ್ ನಲ್ಲಿ ಮೈಸೂರು-ಚೆನ್ನೈ ಶತಾಬ್ಧಿ ಘಂಟೆಗೆ ನೂರು ಕಿ.ಮೀ ವೇಗದಲ್ಲಿ ಚಲಿಸುತ್ತದೆ. ರಾಮನಗರದ ನಂತರ ಮತ್ತೆ ಇಬ್ಬರು ಮಾತಿಗೆ ಇಳಿದರು.

ವ್ಯಕ್ತಿ: ಅಲ್ಲ ಗೌಡ್ರೇ ಭತ್ತ ಬೆಳೆಯೊಕ್ಕಿಂತ ಸ್ವಲ್ಪ ತೆಂಗಿನ್ ತೋಟನು ಮಾಡ್ಬಹುದಲ್ವಾ?
ರೈತ: ಅದ್ರಾಗೂ ಕಷ್ಟ ಇದೆ ಕಣಪ್ಪಾ. ಸ್ವಲ್ಪ ವರ್ಶದ್ ಹಿಂದೆ ನುಸಿ ರೋಗ ಹಿಡ್ದಿದ್ದು ನೆನ್ಪಿಲ್ವಾ. ಆವಾಗಿಂದ ಮರಕ್ಕೆ ೨೦ ಕಾಯಿ ಬಿಟ್ರೆ ಹೆಚ್ಚು. ಅದ್ಕಿಂತ ಮುಂಚೆ ೫೦ ಕಾಯಿನಾದ್ರು ಬರೋದು

ವ್ಯಕ್ತಿ: ನಿಮ್ಗೆ ಮರ ಹತ್ತೋಕೆ ಬರುತ್ತಾ?
ರೈತ: ಇಲ್ಲಪ್ಪಾ. ಅದಕ್ಕೂ ಕೂಲಿಯವ್ರನ್ನೇ ಕರಿಸ್ಬೇಕು. ಮರದಲ್ಲಿ ಕಾಯಿ ಎಷ್ಟಿದ್ರೇನು ಒಂದು ಮರಕ್ಕೆ ೧೦ ರುಪಾಯಿ ಕೊಡ್ಲಿಲ್ಲಾಂದ್ರೆ ಯಾವನೂ ಬರಕ್ಕಿಲ್ಲಾ

ವ್ಯಕ್ತಿ: ಹೌದಾ ಗೌಡ್ರೇ!! ಮತ್ತೆ ಕೆಲ್ವುರು ಕೆಲ್ಸಾನೇ ಇಲ್ಲಾಂತಾರಲ್ಲ
ರೈತ: ಅದೆಲ್ಲಾ ಹಳೆ ಕಾಲ ಕಣಪ್ಪ. ಈಗೆಲ್ಲ ಯಾರ್ ಬೇಸಾಯ ಮಾಡ್ತಾರೆ. ಎಲ್ಲ ಸಿಟಿ ಕಡೆಗೆ ಹೋಯ್ತಾವ್ರೆ. ಅದಿಕ್ಕೆ ಕೂಲಿಗ್ಳ ರೇಟ್ ಕೂಡ ಏರ್ಬಿಟ್ಟಿದೆ. ಹಿಂದಿನ ಕಾಲ್ದಲ್ಲಿ ಮದ್ವೆಗೆ ಬಂದೊವ್ರು ನಮ್ ಕಡೆಯವ್ರ ಅತ್ವಾ ಹೊರ್ಗಿಂದ ಬೇರೆ ಯಾರ ಅಂತ ನೋಡ್ತಿದ್ವಿ. ಈಗ್ ನೋಡಪ್ಪಾ ಮನೆಯಲ್ಲಿ ಕಾರ್ಯಕ್ರಮ್ ಅಯ್ತೆ ಬನ್ನಿ ಅಂತ ಹೇಳಿದ್ರೂ ಯಾವನೂ ಬರಲ್ಲ ಅಂತಾರೆ. ನಾವೆ ಸ್ವಲ್ಪ ಕರ್ಚ್ ಮಾಡ್ಕೊಂದು ಫೋನ್ ಮಾಡ್ದ್ರೂನೂ ಯಾವನೂ ಬರಲ್ಲಾ ನೋಡು.

ವ್ಯಕ್ತಿ: ಅದು ಸರೀನೆ ಬಿಡಿ. ಎಳನೀರ್ ಮಾರೋರ್ಗೆ ಏನ್ ಲಾಭ ಅಲ್ವಾ. ಬೆಂಗ್ಳೂರ್ನಾಗೆ ಎಷ್ಟೊಂದು ಮಾರಾಟ ಆಯ್ತದಲ್ವಾ?
ರೈತ: ಇಲ್ಲ ಕಣಪ್ಪ. ನಾವು ಎಳನೀರು ಮಾರಿದ್ರೆ ನಮ್ಗೆ ಬರ‍ೊದು ಬರಿ ಮೂರು ರುಪಾಯಿ ಅಷ್ಟೆಯಾ. ಉಳ್ದಿದ್ದು ದಲ್ಲಾಳಿಗಳಿಗೆ. ನಾವು ಮಾರೋದು ೩ ರುಪಾಯಿ, ಅದನ್ನ ಕೊಂಡ್ಕೊಂಡೊವ್ನು ಮೈಸೂರ್ನಾಗೆ ೫ ರುಪಾಯಿಗೆ ಮಾರ್ತಾನೆ. ಗಾಡಿ ಚಾರ್ಜ್ ಕೂಡ ಇದ್ಯಲ್ಲ. ಬೆಂಗ್ಳೂರಿಗೆ ಹೋದಾಗ ೧೦ ರುಪಾಯಿ ಆಗತ್ತೆ. ಕೆಲ್ವು ಬೊಂಬಾಯಿಗೂ ಹೋಗ್ತಾವಂತೆ. ಅಲ್ಲಿ ೨೦ ರುಪಾಯಿಗೆ ಮಾರಾಟ ಅಂತೆ.

ಆಗ ಕೆಂಗೇರಿ ಬಂದಾಗಿತ್ತು. ರೈತ ಮಿತ್ರರು ಅಲ್ಲಿಯೇ ಇಳಿದರು. ಎಲ್ಲರಿಗೂ "ಬರ್ತೀನ್ ಕಣ್ರಪ್ಪಾ" ಅಂತ ಹೇಳಿ ಹೋದರು. ಬಹಳ ಇಷ್ಟವಾಗಿದ್ದು ಅವರ ನಯವಾದ ತಾಳ್ಮೆಯ ಉತ್ತರಗಳು. ಅದಕ್ಕೆ ಸ್ವಲ್ಪ ಬರೆಯಬೇಕೆಂದೆನಿಸಿತು. ರೈಲಿನಲ್ಲಿ ಪ್ರಯಾಣಿಸುವಾಗ ಬಹಳಷ್ಟು ಅನುಭವವಾಗಿತ್ತು, ಆಗುತ್ತಿದೆ ಕೂಡ. ಇದೊಂದು ರೀತಿಯ ಅನುಭವ ಅಷ್ಟೆ. ರೈತರ ಮಾತುಗಳು ನನಗೆ ಹೊಸತಲ್ಲ. ನಮ್ಮ ಹಳ್ಳಿಯಲ್ಲೂ ಇದೇ ವಿಷಯ ಮಾತನಾಡುತ್ತಾರೆ. 

ಮುಕ್ಕಾಲು ಘಂಟೆ ತಡವಾಗಿ ಅಂದರೆ ೧೦:೧೫ಕ್ಕೆ ರೈಲು ಬೆಂಗಳೂರು ತಲುಪಿತು. ನಾನು ಇಳಿದುಕೊಂಡು ಸೇರಬೇಕಾದ ಸ್ಥಳ ತಲುಪಿದೆ.

Wednesday, October 30, 2013

ತೆಂಗಿನಕಾಯಿ ಮಸಾಲೆ ಹುಳಿ

ಇತ್ತೀಚಿಗೆ ಬೇಳೆ ಬೇಯಿಸುವುದು ಕಷ್ಟವಾಗಿದೆ. ಏಕೆಂದರೆ ಬೆಳೆಯುವವರು ಕಡಿಮೆ ಜೊತೆಗೆ ಬೆಲೆ ಕೂಡ ಅಧಿಕ! ಕರಾವಳಿಯ ಹಲವಾರು ಮನೆಗಳಲ್ಲಿ ತೆಂಗಿನಕಾಯಿ ಮರ ಸರ್ವೇ ಸಾಮಾನ್ಯ. ಆದ್ದರಿಂದ ಹಲವು ಬಾರಿ ಇಲ್ಲಿಯವರು ತೆಂಗಿನಕಾಯಿ ಮಸಾಲೆ ಹುಳಿ ತಯಾರಿಸುತ್ತಾರೆ. ನಾನು ಕೂಡ ಊರಿಂದ ತೆಂಗಿನಕಾಯಿ ತಂದು ತಯಾರಿಸುತ್ತೇನೆ. ಇದನ್ನು ತಯಾರಿಸುವುದು ಕೂಡ ಅಷ್ಟು ಕಷ್ಟವಿಲ್ಲ. ನಾನು ತಯಾರಿಸುವ ವಿಧಾನವನ್ನು ಇಲ್ಲಿ ಬರೆದಿದ್ದೇನೆ (ಅಮ್ಮ ಹೇಳಿಕೊಟ್ಟಿದ್ದು).

ಮಸಾಲೆಗೆ ಬೇಕಾಗುವ ಸಾಮಾಗ್ರಿಗಳು:


೧) ತುರಿದ ತೆಂಗಿನಕಾಯಿ
೨) ಸ್ವಲ್ಪ ಜೀರಿಗೆ
೩) ಘಾಟಿ ಮೆಣಸು - ೪ ಸಾಕು
೪) ಕರಿಬೇವು ಸೊಪ್ಪು
೫) ನೆನೆಸಿದ ಹುಣಸೇ ಹಣ್ಣು

ಮೊದಲು ಒಂದು ಪಾತ್ರೆಯಲ್ಲಿ ನಿಮಗಿಷ್ಟವಾದ ತರಕಾರಿಯನ್ನು (ತುಂಡುಮಾಡಿದ) ನೀರಿನ ಜೊತೆಗೆ ಸೇರಿಸಿ. ಅದಕ್ಕೆ ಬೇಕಾಗುವಷ್ಟು ಉಪ್ಪು ಮತ್ತು ಚಿಟಿಕೆ ಅರಿಶಿನ ಸೇರಿಸಿ ಬೇಯಿಸಲು ಇಡಿ. ಪಕ್ಕದಲ್ಲಿ ಮಸಾಲೆಗೆ ತಯಾರಿ ನಡೆಸಿ. ಮೊದಲು ತುರಿದ ತೆಂಗಿನಕಾಯಿಗೆ ಸ್ವಲ್ಪ ಜೀರಿಗೆ ಮತ್ತು ಘಾಟಿ ಮೆಣಸು ತುಂಡರಿಸಿ ಸೇರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ. ನಂತರ ಮಿಶ್ರಣಕ್ಕೆ ನೆನೆಸಿದ ಹುಣಸೆ ಹಣ್ಣು ಮತ್ತು ಕರಿಬೇವು ಎಲೆಗಳನ್ನು ಸೇರಿಸಿ, ಮಿಶ್ರಣ ಸಣ್ಣವಾಗುವವರೆಗೆ ರುಬ್ಬಿ. ಇಷ್ಟಾದ ಬಳಿಕ ಹುಳಿಯ ಮಸಾಲೆ ರೆಡಿ. ಅತ್ತ ತರಕಾರಿ ಬೆಂದಿದ್ದರೆ ಅದಕ್ಕೆ ಮಸಾಲೆಯನ್ನು ಸೇರಿಸಿ ಹುಳಿ ಕುದಿಯುವವರೆಗೆ ಇಡಿ. ಇದಕ್ಕೆ ಬೇಕಾದಲ್ಲಿ ಸ್ವಲ್ಪ ಬೇಳೆ ಕೂಡ ಸೇರಿಸಬಹುದು ಕೂಡ ;-). ಇಷ್ಟಾದ ನಂತರ ರುಚಿಯಾದ ತೆಂಗಿನಕಾಯಿ ಮಸಾಲೆ ಹುಳಿ ತಯಾರು :-). ನಂತರ ಅನ್ನಕ್ಕೆ ಕಲಸಿ ಉಂಡು ಆನಂದಿಸಿ! ಇಷ್ಟೇ ಅಲ್ಲದೆ ಇಡ್ಲಿ, ಗೋಧಿ ಹಿಟ್ಟಿನ ದೋಸೆ, ನೀರು ದೋಸೆಗೂ ಈ ಹುಳಿ ಒಗ್ಗುತ್ತದೆ.


ತೆಂಗಿನಕಾಯಿ ಮಸಾಲೆ

ಪಾಲಾಕ್ ಹುಳಿ
ಹುಳಿಯನ್ನು ಒಂದೆರಡು ದಿನ ಇಡಬಹುದು. ಹೆಚ್ಚು ದಿನ ಇಟ್ಟರೆ ತೆಂಗಿನಕಾಯಿಯ ವಾಸನೆ ಹಬ್ಬುತ್ತದೆ. ಈ ಮಸಾಲೆ ಸೌತೆಕಾಯಿ, ಕುಂಬಳಕಾಯಿ, ಬೀನ್ಸ್, ಅಲಸಂಡೆಕಾಯಿ, ಪಾಲಾಕ್ ಸೊಪ್ಪು, ಬಿಟ್ರೂಟ್, ಹೀರೆಕಾಯಿ, ನವಿಲುಕೋಸು, ಹೂಕೋಸು  ಮುಂತಾದ ತರಕಾರಿಗಳಿಗೆ ಒಗ್ಗುತ್ತದೆ. ಬೆಂಡೆಕಾಯಿ , ಬದನೇಕಾಯಿ, ಮೆಂತೆಸೊಪ್ಪು ಮುಂತಾದುವುಗಳಿಗೆ ಸರಿಯಾಗುವುದಿಲ್ಲ.

Monday, October 28, 2013

ಹೊಸ ಬಗೆಯ ಚಹಾ

ಅರೆರೆ ಏನಿದು ಹೊಸ ಬಗೆ ಅಂತಾ. ಎಂತದು ಇಲ್ಲ ಮಾರಾಯ್ರೇ, ಅಮ್ಮ ಹೇಳಿ ಕೊಟ್ಟ ಹೊಸ ವಿಧಾನದ ಚಹಾ ರೂಡಿ ಮಾಡಿಕೊಂಡಿದ್ದೇನೆ ಅಷ್ಟೇ. ಎಲ್ಲರೂ ಮಾಡುವುದು ಸಹ ಇದೇ ರೀತಿಯಲ್ಲಿ ಆದರೆ ಮೊದಲು ನಾನು ಬೇರೆ ತರಹ ತಯಾರಿಸುತ್ತಿದ್ದೆ. ಈಗ ಅಪ್ಡೇಟ್ ಆಗಿದ್ದೇನೆ :-).

ನನ್ನ ಹಳೆಯ ವಿಧಾನ ಹಾಲಿಗೆ ನೀರು ಬೆರೆಸಿ ನಂತರ ಚಹಾಪುಡಿ ಸೇರಿಸಿ ಕುದಿಸುತ್ತಿದ್ದೆ. ಇದರಿಂದ ಹಾಲಿನ ಖರ್ಚು ಕೂಡ ಹೆಚ್ಚು ಜೊತೆಗೆ ಚಹಾ ಪುಡಿ ಕೂಡ ಅಧಿಕ ವೆಚ್ಚವಾಗುತ್ತಿತ್ತು. ಇತ್ತೀಚಿಗೆ ಅಮ್ಮ ಬೆಂಗಳೂರಿಗೆ ಬಂದಾಗ ನನ್ನ ಫರ್ಮ್ವೇರ್ ಅನ್ನು ಬದಲಾಯಿಸಿ ಹೊಸ ರೀತಿಯಲ್ಲಿ ತಯಾರಿಸುವಂತೆ ತಿಳಿ ಹೇಳಿದರು. ತದನಂತರ ನಾನು ಚಹಾ ತಯಾರಿಸುವ ವಿಧಾನದಲ್ಲಿ ಫುಲ್ ಚೇಂಜ್ ;-).  ಮೊದಲು ಚಹಾ ಪಾತ್ರೆಯಲ್ಲಿ ನೀರಿನ ಜೊತೆ ಚಹಾ ಪುಡಿ ಸೇರಿಸಿ ನಂತರ ಚೆನ್ನಾಗಿ ಕುದಿಸಿ. ಡಿಕಾಕ್ಷನ್ ನಿಮಗೆ ಬೇಗಾವುವಷ್ಟು ಖಡಕ್ ಮಾಡಿಕೊಳ್ಳಿ. ತದನಂತರ ಅದಕ್ಕೆ ಒಂದು ಲೋಟೆ ಹಾಲನ್ನು ಸೇರಿಸಿ ಜೊತೆಗೆ ಬೇಕಾಗುವಷ್ಟು ಸಕ್ಕರೆ ಸೇರಿಸಿ ಮತ್ತೊಮ್ಮೆ ಕುದಿಸಿ. ಸ್ವಲ್ಪ ಹೊತ್ತಿನಲ್ಲಿ ಬಿಸಿಯಾದ ರುಚಿಯಾದ ಚಹಾ ತಯಾರು :-). ಈ ವಿಧಾನದಿಂದ ಚಹಾ ಪುಡಿ ಮತ್ತು ಹಾಲಿನ ಖರ್ಚು ಕೂಡ ಕಡಿಮೆ. ಚಹಾದೊಂದಿಗೆ ಒಂದೆರಡು ಚಕ್ಕುಲಿ ಜೊತೆಗೆ ಮಳೆ ಸುರಿಯುತ್ತಿದ್ದರೆ ಅದರ ಅನುಭವವೇ ಬೇರೆ :-).  ಸಧ್ಯಕ್ಕೆ  ಫೋಟೋದಲ್ಲಿನ ಚಹಾ ಸವಿದು ಸಂತೃಪ್ತಿ ಪಡಿ ;-).  ಚಕ್ಕುಲಿ ಅಮ್ಮ ತಯಾರಿಸಿದ್ದು, ಮಳೆ ಮಾತ್ರ ಇರಲಿಲ್ಲ :-).

ಚಹಾ
ಸೂಚನೆ: ಹೆಚ್ಚು ಚಹಾ ಕುಡಿದು ನಿದ್ರೆ ಬಾರದಿದ್ದರೆ ಅದಕ್ಕೆ ಲೇಖಕರು ಜವಾಬ್ದಾರರಲ್ಲ ;-)

ಕೊನೆ ಹನಿ: ಸಕ್ಕರೆ ಡಬ್ಬಿ ಪಕ್ಕದಲ್ಲೇ ಇಟ್ಟುಕೊಳ್ಳಿ ಕೆಲವೊಮ್ಮೆ ಸೇರಿಸಲು ಮರೆತುಹೋಗುತ್ತದೆ. ಇಷ್ಟೆಲ್ಲ ತಯಾರಿಸಿದ ನಂತರ ನಾನು ಬಹಳಷ್ಟು ಸಲ ಶುಗರ್ ಲೆಸ್ ಚಹಾ ಕುಡಿದಿದ್ದು ಉಂಟು :-(. ಹಾಗೆ ಸಕ್ಕರೆ ಡಬ್ಬಿ ಪೂರ್ತಿ ಸುರಿಯಬೇಡಿ ;-).

Sunday, September 15, 2013

ಶಿ'ರಾಡಿ' ಮೇಳ - ೨೦೦೯

ಇದು ನನ್ನ ಹಳೆಯ ಬರಹ. ಪ್ರತಿ ಬಾರಿ ಶಿರಾಡಿ ಘಾಟಿ ರಸ್ತೆಯ ಬವಣೆ ಯಾರು ಕೇಳುವವರಿಲ್ಲ. ಈ ಬಾರಿಯೂ ಈ ರಸ್ತೆ ತನ್ನ ಪ್ರತಿ ವರ್ಷದ ವೈಭವಕ್ಕೆ ಮರಳಿದೆ. ಇತ್ತೀಚಿಗೆ ಮ್ಯಾಂಗನೀಸ್ ಲಾರಿಗಳು ಇಲ್ಲದಿದ್ದರೂ ಅವುಗಳ ಹಿಂದಿನ ಕೊಡುಗೆ ಅಪಾರ. ಶಿರಾಡಿ ಘಾಟಿ ರಸ್ತೆಯನ್ನು ಸಂಪೂರ್ಣ ಕಾಂಕ್ರಿಟ್ ಮಾಡುತ್ತಾರೆಂಬ ರೈಲು ಸುದ್ದಿ ಸುಮಾರು ೪ ವರ್ಷಗಳಿಂದ ಕೇಳಿಬರುತ್ತಿದೆ. ಆದರೆ ಹೆದ್ದಾರಿಯ ಸಂಖ್ಯೆಯನ್ನು ೪೮ ರಿಂದ ೭೫ ಕ್ಕೆ ಬದಲಾಯಿಸಿದ್ದು ಮಾತ್ರ ಇದುವರೆಗಿನ ಸಾಧನೆ. ಪ್ರತಿ ಮಳೆಗಾಲದಲ್ಲಿ ರಸ್ತೆ ಹಾಳಾಗುತ್ತದೆ ನಂತರ ಜನವರಿ ವೇಳೆಗೆ ಅರೆಬರೆ ಪ್ಯಾಚ್ ಮಾಡುತ್ತಾರೆ. ಒಟ್ಟಾರೆ ಇದಕ್ಕೆ ಶಾಶ್ವತ ಪರಿಹಾರ ಇನ್ನೂ ಗಗನ ಕುಸುಮವಾಗಿ ಉಳಿದಿದೆ :-(. ಯೆಲ್ಲಾಪುರ ಘಾಟಿಯಂತೆ, ಶಿರಾಡಿ ರಸ್ತೆಯನ್ನು ಉತ್ತಮ ನಿರ್ಮಾಣ ಕಂಪೆನಿಗೆ ಗುತ್ತಿಗೆಗೆ ನೀಡಿದರೆ ಸರಿ ಹೋಗಬಹುದು. ಆದರೆ ಇಲ್ಲಿಯ ಲೋಕಲ್ ಗುತ್ತಿಗೆದಾರರು ಭ್ರಷ್ಟರ ಜೇಬು ತುಂಬಿಸಿದ್ದಾರೆ ಎಂಬ ಸುದ್ಧಿ ಕೂಡ ಇದೆ. ಶಾಶ್ವತ ಪರಿಹಾರ ಕಂಡರೆ ಎಲ್ಲಿ ಇವರ ಜೇಬು ಬರಿದಾಗುವುದೋ ಎಂಬ ಅಳಲು ಇರಬಹುದು. ಇರಲಿ, ಈ ಬರಹವನ್ನು ಸುಮಾರು ನಾಲ್ಕು ವರ್ಷದ ಹಿಂದೆ ಬರೆದಿದ್ದು. ಈ ವರುಷಕ್ಕೂ ಸರಿಹೊಂದುವುದು. ಓದಿ ನಿಮ್ಮ ಅಭಿಪ್ರಾಯ ತಿಳಿಸಿ.



ರಾಷ್ಟ್ರೀಯ ಹೆ(ಹೊಂಡ)ದ್ದಾರಿ-೪೮ಯಲ್ಲಿ ಅತ್ಯಂತ ಕ್ಲಿಷ್ಟವಾದ ಪ್ರಯಾಣ ಎಂದರೆ ಶಿರಾಡಿ ಘಾಟಿಯ ೪೦ ಕೀ.ಮಿ ಗಳು. ಇತ್ತೀಚಿಗೆ ಘಾಟಿ ಪ್ರಯಾಣಕ್ಕೆ ಸಂಪೂರ್ಣ ಅಯೋಗ್ಯವಾಗಿದೆ. ಬೇಡದ್ದಕ್ಕೆ ಖರ್ಚು ಮಾಡುವ ಸರ್ಕಾರಗಳಿಗೆ, ಈ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟ್ ಮಾಡಲಿಕ್ಕೆ ಹಣವಿಲ್ಲ. ಆದ್ದರಿಂದ ಈ ರಸ್ತೆ ಕಾಂಕ್ರಿಟೀಕರಣಕ್ಕೆ ದೇಣಿಗೆ ಸಂಗ್ರಹಿಸಲು ಹಾಗೂ ಈ ರಸ್ತೆಯನ್ನು ಸದಾ ಸುದ್ದಿಯಲ್ಲಿಡಲು ಹೆದ್ದಾರಿ ಇಲಾಖೆ ತೀರ್ಮಾನಿಸಿದೆ. ಅದರಂತೆ ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದೊಂದಿಗೆ ಶಿ'ರಾಡಿ' ಮೇಳ - ೨೦೦೯ ಹಮ್ಮಿಕೊಳ್ಳಲು ತೀರ್ಮಾನಿಸಿದೆ. ಈ ಮೇಳದಲ್ಲಿ ಅನೇಕ ವಿಧದ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳು ನಡೆಯಲಿದೆ ಅಂತ ಇಲಾಖೆ ಘೋಷಿಸಿದೆ. ಹಾಗೆ ವ್ಯಾಪಾರ ಮಳಿಗೆಗಳು ತಲೆ ಎತ್ತಲಿವೆ ಎಂದು ಅದು ಹೇಳಿದೆ. ಬಂದ ದೇಣಿಗೆಯಲ್ಲಿ ಶಿರಾಡಿಯನ್ನು ಸಂಪೂರ್ಣ ದುರಸ್ತಿಗೊಳಿಸಲಾಗುವುದು ಎಂಬ ಭರವಸೆ(??) ಕೂಡ ನೀಡಿದೆ.

ಮೊದಲೇ ಹೇಳಿದಂತೆ ಅನೇಕ ಸ್ಪರ್ಧೆಗಳು ಕಾರ್ಯಕ್ರಮಗಳು ಕಾಲಕ್ಕೆ ತಕ್ಕಂತೆ ನಡೆಯಲಿವೆ. ಮೊದಲನೆ ಬಾರಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಡೆಯುತ್ತಿರುವುದರಿಂದ ಅನೇಕ ಪ್ರಾಯೋಜಕರು ಪ್ರಾಯೋಜಕತೆಗೆ ಮುಂದೆ ಬಂದಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಗಣಿ ಮತ್ತು ರೆಸಾರ್ಟ್ ಸಂಸ್ಕೃತಿಯನ್ನು ಉತ್ತೇಜಿಸಲು ಗಣಿ ದೊರೆಗಳು ಬಹಳ ಹಣ ಸುರಿಯಲು ನಿರ್ಧರಿಸಿದ್ದಾರೆ. 

ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರು

೧) ಚಿತ್ರದುರ್ಗ-ತುಮಕೂರು ಸೀಮೆಯ ಗಣಿ ನಾಯಕರು.
೨) ಮಂಗಳೂರು ರಿಫೈನೆರಿ (MRPL)
೩) ನವಮಂಗಳೂರು ಬಂದರು ಮಂಡಳಿ (NMPT)
೪) ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ.
೫) ಸರ್ಕಾರಿ ಮತ್ತು ಖಾಸಗಿ ಬಸ್ಸು ಮಾಲೀಕರು
೬) ರೈಲ್ವೆ ಇಲಾಖೆ.

ಪ್ರಾಯೋಜಕರ ಕಿರು ಪರಿಚಯ:

೧) ಗಣಿ ನಾಯಕರು ಎಲ್ಲರಿಗೂ ಚಿರಪರಿಚಿತರು. ೨೦ ಟನ್ ಗಣಿ ಸಾಗಿಸುವ ಬದಲು ೪೦ ಟನ್ ಸಾಗಿಸಿ ಶಿ'ರಾಡಿ' ಶಬ್ದಕ್ಕೆ ಮಹತ್ವ ಕೊಟ್ಟವರು.
೨) ದಿನಕ್ಕೆ ೨೦೦ ಬುಲೆಟ್ ಟ್ಯಾಂಕರ್ ಗಳು ಶಿರಾಡಿಯಲ್ಲಿ ಸಂಚರಿಸಲು ಕಾರಣಕರ್ತರಾದ MRPL ಅವರು ಕೂಡ ಘಾಟಿ ರಸ್ತೆ ಸುಸ್ಥಿತಿಗೆ ಕಾರಣರಾದವರಲ್ಲಿ ಒಬ್ಬರು.
೩) ಶಿರಾಡಿ ಗುಣಮಟ್ಟವನ್ನು ಅತ್ಯಂತ ಸೂಕ್ಷ್ಮವಾಗಿ ವೀಕ್ಷಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ.
೪) ತನ್ನ ಸಮರ್ಥ್ಯಕ್ಕಿಂತಲೂ ಅಧಿಕ ಗಣಿ ರಫ್ತು ಮಾಡಿ ಸಾವಿರಾರು ಗಣಿ ಲಾರಿಗಳನ್ನು ಅತಿಥಿಯಂತೆ ಕಾಣುತ್ತಿರುವ NMPT
೫) ಹಾಗೆಯೇ ರೈಲುಗಳಿಗೆ ಅಡ್ಡಗಾಲು ಹಾಕುತ್ತಿರುವ ಸರಕಾರೀ ಮತ್ತು ಖಾಸಗಿ ಬಸ್ಸು ಮಾಲಕರು.
೬) ಕೊನೆಯದಾಗಿ ಎಲ್ಲ ಲಾಬಿಗಳಿಗೂ ಸೈ ಎನ್ನುವ ರೈಲ್ವೆ ಇಲಾಖೆ.

ವಿಶೇಷ ವ್ಯಾಪಾರ ಮಳಿಗೆಗಳು

೧) ಹಲವು ಪ್ರದೇಶದ ವಿಶೇಷ ಗಣಿಗಳ ಪರಿಚಯ.
೨) ಹೆದ್ದಾರಿ ಇಲಾಖೆ ಇಂದ ಗುಣಮಟ್ಟದ(?) ರಸ್ತೆ ಮಾಡುವುದು ಹೇಗೆ.
೩) ದೇಶದ ಪ್ರತಿಷ್ಟಿತ ವಾಹನ ಸಂಸ್ಥೆಯಿಂದ ಶಿರಾಡಿ ಘಾಟಿಗೆಂದೆ ತಯಾರಿಸಿದ ವಿಶೇಷ ವಾಹನಗಳ ಅನಾವರಣ.

ಸ್ಪರ್ಧೆಗಳ ವಿವರ ಇಂತಿದೆ:
 
ಸೂಚನೆ:
ಸ್ಪರ್ಧೆಗಳಿಗೆ ಪ್ರವೇಶ ಶುಲ್ಕ ಇದೆ. ಹಾಗೆಯೇ ಗೆದ್ದವರಿಗೆ ವಿಶೇಷ ಬಹುಮಾನಗಳು ಕೂಡ. 

ಬೇಸಿಗೆ ವಿಶೇಷ - ೧: ಶಿರಾಡಿಯಲ್ಲಿ ರಸ್ತೆ ಹುಡುಕುವ ಸ್ಪರ್ಧೆ  ಎಲ್ಲ ಸಾರ್ವಜನಿಕರಿಗೆ ಈ ಸ್ಪರ್ಧೆಯಲ್ಲಿ ಅವಕಾಶ ಇದೆ. ಅತಿ ಹೆಚ್ಚು ವಿಸ್ತೀರ್ಣದಲ್ಲಿ ರಸ್ತೆ ಕಂಡು ಹಿಡಿದವರಿಗೆ ಬಹುಮಾನ.  ಸೂಚನೆ: ಸ್ವಲ್ಪವೂ ರಸ್ತೆ ಕಾಣದಿದ್ದರೆ ನಾವು ಜವಾಬ್ದಾರರಲ್ಲ.


ಬೇಸಿಗೆ ವಿಶೇಷ - ೨: ಘಾಟಿಯಲ್ಲಿ ವೋಲ್ವೋ ಬಸ್ಸು ಚಾಲನೆ ಸ್ಪರ್ಧೆ
ಇದು ಈ ಬಾರಿಯ ವಿಶೇಷ. ಘಾಟಿಯಲ್ಲಿ ಇಳಿಯುವುದು ಸ್ವಲ್ಪ ಸುಲಭವಾದ್ದರಿಂದ, ಸ್ಪರ್ಧೆ ರೋಚಕತೆ ಹೆಚ್ಚಿಸಲು, ಘಾಟಿ ಏರುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಗುಂಡ್ಯ ಫಾರೆಸ್ಟ್ ಗೇಟ್ ಇಂದ ಸಕಲೆಶಪುರದವರೆಗಿನ ೪೦ ಕೀ.ಮಿ ರಸ್ತೆ(ರಾಡಿ)ಯಲ್ಲಿ ಈ ಸ್ಪರ್ಧೆ.

ನಿಯಮಗಳು:

೧) ಬಸ್ಸು ಇಲಾಖೆ ವತಿಯಿಂದ ಒದಗಿಸಲಾಗುವುದು. ಒಟ್ಟಿಗೆ ಮೂರು ಬಸ್ಸುಗಳನ್ನು ಒದಗಿಸಲಾಗುವುದು.
೨) ಬಸ್ಸು ಪಲ್ಟಿ ಹೊಡೆದರೆ ಅದನ್ನು ಸಂಪೂರ್ಣ ಸರಿಪಡಿಸುವ ಜವಾಬ್ದಾರಿ ಚಾಲಕರದ್ದು.
೩) ತಿರುವು ಮತ್ತು ಹೊಂಡಗಳಲ್ಲಿ ಜೋರಾಗಿ ಓಡಿಸಿ ಬಸ್ಸು ಕಂದಕಕ್ಕೆ ಬಿದ್ದರೆ ನಾವು ಜವಾಬ್ದಾರರಲ್ಲ.
೪) ಬಸ್ಸಿನ ರೇರ್ ಇಂಜಿನ್ನಿಗೆ ಸ್ವಲ್ಪವೂ ಹಾನಿಯಗಕೂಡದು.
೫) ಘಾಟಿ ಮಧ್ಯೆ ಕೇವಲ ೩ ಬಾರಿ ಫರ್ಸ್ಟ್ ಗೆಯರ್ ಹಾಕುವ ಅವಕಾಶವಿದೆ.
೬) ಘಾಟಿ ಮಧ್ಯದಲ್ಲಿ ೬-ನೇ ಗೆಯರ್ ನಲ್ಲಿ ಹೆಚ್ಚು ಹೊತ್ತು ಚಲಾಯಿಸುವವರಿಗೆ ವಿಶೇಷ ಬೋನಸ್ ಬಹುಮಾನ.
ವಿಶೇಷ ಸೂಚನೆ: ಗಣಿ ಲಾರಿ ಚಾಲಕರಿಗೆ ಮೊದಲ ಪ್ರಾಶಸ್ತ್ಯ

ಮಳೆಗಾಲ ವಿಶೇಷ: ಮಳೆಗಾಲದಲ್ಲಿ ಘಾಟಿ ಸಂಪೂರ್ಣ ಕೆಸರುಮಯವಾಗುವುದರಿಂದ ಸ್ಪರ್ಧೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

೧) ಮೊದಲ ಹತ್ತು ಕೀ.ಮಿ ರಾಜಕೀಯ ವಿಶೇಷ:  ಮಂತ್ರಿ ಮಹೋದಯರಿಂದ ಮತ್ತು ರಾಜಕೀಯ ನಾಯಕರುಗಳಿಂದ ವಿಶೇಷ ಕೆಸರೆರಚಾಟದ ಮನೋರಂಜನೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಶುಲ್ಕ ಇದೆ.

೨) ನಂತರದ ೨೦ ಕೀ.ಮಿ ನಲ್ಲಿ ಭತ್ತ ಬೆಳೆಯುವ ಸ್ಪರ್ಧೆ: ಆಯ್ದ ೨೦ ಪ್ರಗತಿಪರ ರೈತರನ್ನು ಆಯ್ಕೆ ಮಾಡಿ ಒಬ್ಬರಿಗೆ ೧ ಕೀ.ಮಿ ಗುತ್ತಿಗೆಯಂತೆ ಕೃಷಿ ಮಾಡಲು ಅನುಮತಿ ನೀಡಲಾಗುವುದು. ಅಧಿಕ ಇಳುವರಿ ತರುವ ೮ ರೈತರಿಗೆ ಮೂರು ಬಹುಮಾನಗಳು ಹಾಗು ೫ ಸಮಾಧಾನಕರ ಬಹುಮಾನುಗಳು ಇವೆ.

೩) ಕೊನೆಯ ೧೦ ಕೀ.ಮಿ ನಲ್ಲಿ ಬಾಳೆಗಿಡ ನೆಡುವ ಸ್ಪರ್ಧೆ: ಇಲ್ಲೂ ೨೦ ಮಂದಿಗೆ ಅವಕಾಶ. ಪಾರ್ಟಿ ೫೦೦ ಮೀ ಗೆ ಗುತ್ತಿಗೆ. ಬಹುಮಾನಗಳು ಭತ್ತ ಬೆಳೆಯುವ ಸ್ಪರ್ಧೆಯಂತೆ.

ನಿಯಮಗಳು: 

೧) ಕೆಸರೆರಚಾಟದ ಸಮಯದಲ್ಲಿ ಕೆಸರು ವೀಕ್ಷಕರ ಮೇಲೆ ಬಿದ್ದರೆ ಆಯೋಜಕರು ಜವಾಬ್ದಾರರಲ್ಲ. ತುಂಬ ಬಿದ್ದರೆ ತಿರುಗಿ ನೀವು ಕೆಸರನ್ನು ಎಸೆಯಬಹುದು.
೨) ಕೃಷಿಗೆ ಬೇಕಾದ ಉಪಕರಣಗಳನ್ನು ರೈತರೇ ತರಬೇಕು.
೩) ಮಳೆಗಾಲದಲ್ಲಿ ಪ್ರವಾಹ ಬಿರುಗಾಳಿ ಸಾಮಾನ್ಯ. ಬೆಳೆ ನಷ್ಟವಾದರೆ ಆಯೋಜಕರು ಹೊಣೆ ಅಲ್ಲ.
೪) ಮಳೆ ಬರದಿದ್ದರೂ ಆಯೋಜಕರು ಹೊಣೆ ಅಲ್ಲ.
೫) ನೈಸರ್ಗಿಕ ಕೃಷಿಗೆ ಮಾತ್ರ ಅನುಮತಿ.

ಚಳಿಗಾಲ ವಿಶೇಷ: ಶಿರಾಡಿ ಹೈವೆ ಕಂಬಳ
ಸಂಪೂರ್ಣ ೪೦ ಕೀ.ಮಿ. ವ್ಯಾಪ್ತಿಯಲ್ಲಿ ಕಂಬಳ ನಡೆಯಲಿದೆ. ಹಾಗೆಯೇ ಕೋಣಗಳನ್ನು ಸೊಗಸಾಗಿ ಸಿಂಗಾರ ಮಾಡಿದವರಿಗೂ ವಿಶೇಷ ಬಹುಮಾನಗಳಿವೆ.

ಹಾಗೆ ರಾತ್ರಿಯಂದು ವಿಶೇಷ ಯಕ್ಷಗಾನ ಮೇಳ ನಡೆಯಲಿವೆ. ಮುಖ್ಯವಾದವು ಶಿರಾಡಿ ಮಹಿಮೆ, ಗಣಿ ಕೈಲಾಸ ಮುಂತಾದವು.

ಸೂಚನೆ: ಕಂಬಳದಲ್ಲಿ ಭಾಗವಹಿಸುವವರು ಹೊಂಡದ ಬಗ್ಗೆ ಜಾಗೃತರಾಗಿರಬೇಕು ಎಂದು ವಿನಂತಿ. ಹಾಗೆಯೇ ಕಂದಕಗಳು ಇರುವುದರಿಂದ ಕೋಣಗಳನ್ನು ಸ್ವಲ್ಪ ನಿದಾನವಾಗಿ ಹೊಡೆಯುವುದು. ಮುಗ್ಗರಿಸಿ ಬಿದ್ದಲ್ಲಿ ಅಥವಾ ಕಂದಕಕ್ಕೆ ಬಿದ್ದಲ್ಲಿ ಆಯೋಜಕರು ಜವಾಬ್ದಾರರಲ್ಲ.

ಪ್ರವೇಶ ಶುಲ್ಕ:

೧) ರಸ್ತೆ ಹುಡುಕುವ ಸ್ಪರ್ಧೆಗೆ ೨ ಮೂಟೆ ಸಿಮೆಂಟ್ ಅಥವಾ ಅದಕ್ಕೆ ಸಮಾನಾಂತರವಾದ ಜಲ್ಲಿ ಕಲ್ಲು.
೨) ವೋಲ್ವೋ ಬಸ್ ಚಾಲನೆ ಸ್ಪರ್ಧೆಗೆ ೮ ಮೂಟೆ ಸಿಮೆಂಟ್ ಮತ್ತು ಅಪಘಾತ ಠೇವಣಿ ೨ ಲೋಡ್ ಜಲ್ಲಿ ಕಲ್ಲು. ಬಸ್ಸು ಸರಿಯಾಗಿ ಘಾಟಿ ಹತ್ತಿದರೆ ಠೇವಣಿ ವಾಪಾಸ್ ಮಾಡಲಾಗುವುದು.
೩) ಕೆಸರೆರಚಾಟದ ಕಾರ್ಯಕ್ರಮಕ್ಕೆ ೧ ಮೂಟೆ ಸಿಮೆಂಟ್.
೪) ಕೃಷಿ ಮತ್ತು ಬಾಲೆ ನೆಡುವ ಸ್ಪರ್ಧೆಗೆ ೪ ಮೂಟೆ ಸಿಮೆಂಟ್.
೫) ಕಂಬಳಕ್ಕೆ ೬ ಮೂಟೆ ಸಿಮೆಂಟ್ ಮತ್ತು ವೀಕ್ಷಣೆಗೆ ೨ ಮೂಟೆ ಸಿಮೆಂಟ್. ಕೋಣಗಳಿಗೆ ಪ್ರವೇಶ ಶುಲ್ಕ ಇಲ್ಲ.
೬) ಯಕ್ಷಗಾನಕ್ಕೆ ೧ ಮೂಟೆ ಸಿಮೆಂಟ್
೭) ಪ್ರತಿ ವ್ಯಾಪಾರ ಮಳಿಗೆಗೆ ದಿನಕ್ಕೆ ೨ ಮೂಟೆ ಸಿಮೆಂಟ್ ಬಾಡಿಗೆ ಇದೆ.

ಬಹುಮಾನಗಳು:

ಮೊದಲನೆಯ ಬಹುಮಾನ: ೫ ಟನ್ ವಿಶೇಷ ಗಣಿ ಮಣ್ಣು (ಮಣ್ಣು ಹೊತ್ತು ಕೊಂಡು ಹೋಗಲು ತಮ್ಮದೇ ವಾಹನಗಳನ್ನು ತರಬೇಕಾಗಿ ವಿನಂತಿ)
ಎರಡನೆಯ ಬಹುಮಾನ: ೦.೫ ಬಾರೆಲ್ ಕಚ್ಚಾ ತೈಲ.
ಮೂರನೆಯ ಬಹುಮಾನ: NMPT ವತಿಯಿಂದ ವಿಶೇಷ ರಫ್ತು ಕೂಪನ್.
೫ ಸಮಾಧಾನಕರ ಬಹುಮಾನುಗಳು: ಬಸ್ಸು ಮಾಲಿಕರಿಂದ ವಿಶೇಷ ರಿಯಾಯಿತಿ ಕೂಪನ್.

ಬಂಪರ್ ಬಹುಮಾನ:
ಅಧಿಕ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಗಣಿ ಪ್ರದೇಶಗಳಿಗೆ ವಿಶೇಷ ಪ್ರವಾಸ.

ಬಹುಮಾನ ವಿತರಕರು: ರಾಜ್ಯದ ಗಣಿ ಶ್ರೇಷ್ಠ ನಾಯಕರು.
ವಿತರಣೆ ದಿನ: ವರುಷದ ಕೊನೆಯ ದಿನ.

ಸಾರ್ವಜನಿಕರಲ್ಲಿ ವಿನಂತಿ: ಬಂದ ಬಹುಮಾನಗಳನ್ನು ಆಯೋಜಕರಿಗೆ ಒಪ್ಪಿಸಿದರೆ ಶಿರಾಡಿ ದುರಸ್ತಿ ಕಾರ್ಯ ಮತ್ತಷ್ಟು ಚುರುಕುಗೊಳ್ಳುತ್ತದೆ. ಸಾರ್ವಜನಿಕರು ಈ ವಿಷಯವನ್ನು ಉದಾರ ಮನಸ್ಸಿನಿಂದ ಪರಿಗಣಿಸಬೇಕಾಗಿ ವಿನಂತಿ. ಹಾಗೆ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಕೋರುತ್ತೇವೆ.

ಅಧಿಕ ಮಾಹಿತಿ: ನಿಮ್ಮ ಸಮೀಪದ ಹೆದ್ದಾರಿ ಅಥವಾ ಲೋಕೋ(ಅ)ಪಯೋಗಿ ಇಲಾಖೆಯನ್ನು ಸಂಪರ್ಕಿಸಿ!!

ಲಕ್ಷ್ಮೀಯ ನೆನಪುಗಳು

ಜೋಗದಲ್ಲಿ ಮುದ್ದಾದ ಬೆಕ್ಕನ್ನು ಕಂಡಾಗ ನಮ್ಮ ಮನೆಯ ಅಚ್ಚುಮೆಚ್ಚಿನ ಬೆಕ್ಕು ಲಕ್ಷ್ಮೀಯ ನೆನಪು ಕಾಡಿತು. ಆ ನೆನಪಿಗಾಗಿ ಈ ಸಣ್ಣ ಗೀಚು.

ಲಕ್ಷ್ಮೀ
ಸ್ವಲ್ಪ ವರ್ಷಗಳ ಹಿಂದೆ ಮೈಸೂರು ಬಿಟ್ಟು ಊರಿಗೆ ಬಂದಾಗ, ನಮ್ಮ ಜೊತೆ ನೀನು ಕೂಡ ಮನೆ ಸದಸ್ಯೆಯಾದೆ. ಎಲ್ಲಿಂದಲೋ ಬಂದವಳು ಕಡೆಗೆ ನಮ್ಮ ಮನೆಯೇ ನಿನಗೆ ವಾಸಸ್ಥಳವಾಯಿತು. ಬೆಕ್ಕುಗಳೆಂದರೆ ಸಿಟ್ಟಾಗುತ್ತಿದ್ದ ಅಪ್ಪನ ಮನ ಗೆದ್ದೆ. ಸಣ್ಣವಳಿದ್ದಾಗ ನಿನ್ನ ಜೊತೆ ಆಡಿದ್ದು ಈಗಲೂ ನೆನಪಿದೆ. ಮನೆ ಮಂದಿ ತಿನ್ನುವುದೆಲ್ಲವನ್ನೂ ನೀನು ತಿನ್ನುತ್ತಿದ್ದೆ. ನಮ್ಮ ಮನೆಯಲ್ಲಿ ಮಾಂಸಾಹಾರ ಇಲ್ಲದಿದ್ದರೂ ಬೇಜಾರು ಪಟ್ಟುಕೊಳ್ಳದೆ ಅನ್ಯರ ಮನೆಯಲ್ಲಿ ತಿಂದು ಮತ್ತೆ ಮನೆಗೆ ವಾಪಾಸಾಗುತ್ತಿದ್ದೆ. ಮನೆಯಲ್ಲಿ ಇರುವಷ್ಟು ದಿನ ಒಂದು ದಿನವೂ ಹಾಲನ್ನು ಕದ್ದು ಕಳ್ಳ ಬೆಕ್ಕು ಎಂದೆಣಿಸಿಕೊಳ್ಳಲಿಲ್ಲ. ಅಮ್ಮ ತೋಟಕ್ಕೆ ಹೋದಾಗ ಅವರ ಹಿಂದೆಯೆ ಹೋಗುತ್ತಿದ್ದೆ. ಆರು ಬಾರಿ ಅಮ್ಮ ಕೂಡ ಆಗಿದ್ದೆ. ನಿನ್ನ ಒಂದು ಮರಿ, ಗಂಡು ಬೆಕ್ಕಿನ ಅಟ್ಟಹಾಸಕ್ಕೆ ಬಲಿಯಾದಾಗ ಮನೆಯವರಿಗೆ ಆದ ಬೇಸರ ಅಷ್ಟಿಷ್ಟಲ್ಲ. ಆದರೆ ನಿನ್ನ ಮಕ್ಕಳೋ, ಒಂದು ಸರಿಯಾಗಿ ಬದುಕದೆ ನಿನಗಿಂತ ಮೊದಲೇ ತೀರಿಕೊಂಡವು.  ಆದರೂ ನೀನು ಗಟ್ಟಿಮುಟ್ಟಾಗಿದ್ದೆ. ಕಾಲಾನಂತರ ನಿನಗೇನಾಯಿತೋ ಕಣ್ಣು ಮಂದವಾಗತೊಡಗಿತು. ಮನೆ ಬಿಟ್ಟು ಹೋಗುತ್ತಲೇ ಇರಲಿಲ್ಲ. ಕಣ್ಣು ಮಂದವಾಗಿದ್ದರೂ ಗುಂಡನನ್ನು ಅದ್ಯಾಕೆ ಹೆದರಿಸುತ್ತಿದ್ದೆಯೋ ನಾ ಕಾಣೆ. ಎಷ್ಟೇ ಕಷ್ಟವಾದರೂ ಮನೆಯೊಳಗೆ ಹೇಸಿಗೆ ಮಾಡುತ್ತಿರಲಿಲ್ಲ. ಕಣ್ಣು ಸರಿಯಾಗಿಲ್ಲದಿದ್ದರೂ ಮನೆಯ ಪರಿಚಯ ನಿನಗೆ ಚೆನ್ನಾಗೆ ಅರಿವಿತ್ತು. ಮನೆಯ ಯಾವುದೇ ಭಾಗಕ್ಕೂ ಯಾವುದೇ ಅಂಜಿಕೆಯಿಲ್ಲದೆ, ಸಂದೇಹವಿಲ್ಲದೆ ಹೋಗುತ್ತಿದ್ದೆ. 

ಅಂದು ಶುಕ್ರವಾರ ರಾತ್ರಿ ಮೇ ೨೨, ೨೦೦೯. ಸ್ವಲ್ಪ ಮೊಂಡುತನ ತೋರಿಸುತ್ತಿದ್ದ ನಿನ್ನನ್ನು ಕಿರಿಯಕ್ಕ ಸಣ್ಣಗೆ ಜೋರು ಮಾಡಿದಳೆಂದು ಪಂಪ್-ಹೌಸ್ ತನಕ ಓಡಿ ಹೋದೆ. ಅಲ್ಲಿ ನಾಯಿಗಳು ಬೊಗಳುತ್ತಿದ್ದವು. ನಿನಗೆ ಕಣ್ಣು ಬೇರೆ ಕಾಣಿಸುತ್ತಿರಲಿಲ್ಲ ಆದರೂ ಅಲ್ಲಿ ತನಕ ಯಾಕೆ ಹೋದೆಯೋ ಯಾರಿಗೆ ಗೊತ್ತು. ಹೆಚ್ಚೆಂದರೆ ಮನೆಯ ಹೊರಗೆ ಹೋಗುತ್ತಿದ್ದೆ. ಬೆಳಗ್ಗೆ ಪೂರ್ತಿ ಹುಡುಕಿದರೂ ನಿನ್ನನ್ನು ನೋಡಲಾಗದೆ ಅಮ್ಮ ತಳಮಳಿಸುತ್ತಿದ್ದರು. ಕಡೆಗೆ ನೀನು ಸಿಕ್ಕಿದ್ದು ಹೆಣವಾಗಿ ಪಂಪ್-ಹೌಸ್ ಬಳಿ. ನಾಲ್ಕು ವರ್ಷ ನಮ್ಮ ಮನೆಯ ಮುದ್ದಿನ ಸದಸ್ಯೆಯಾಗಿ ಇದ್ದವಳು, ತೀರಿಕೊಂಡಾಗ ನಮಗೆ ಆದ ದುಃಖ ಅಷ್ಟಿಷ್ಟಲ್ಲ. ಈಗಲೂ ನಿನ್ನ ನೆನಪು ನಮಗೆ ಆಗಾಗ ಕಾಡುತ್ತದೆ.

Friday, August 16, 2013

ಎಳಮುರಿ ಸೊಪ್ಪು ತಂಬೂಳಿ

ಒಂದೆಲಗ ತಂಬೂಳಿಯ ನಂತರ ನನ್ನ ಅಚ್ಚು ಮೆಚ್ಚಿನ ತಂಬೂಳಿ ಎಳಮುರಿ ಸೊಪ್ಪು ತಂಬೂಳಿ. ಬಹಳ ಕೂಲ್ ತಂಬೂಳಿ ಇದು. ಮನೆಯಲ್ಲಿ ಕೂಡ ಬೆಳೆಯಬಹುದು. ಒಂದೆಲಗ ಗಿಡದಂತೆ ಹೆಚ್ಚು ಆರೈಕೆ ಕೂಡ ಬೇಕಿಲ್ಲ. ಕರಾವಳಿಯ ಹಲವಾರು ಮನೆಗಳಲ್ಲಿ ಈ ಗಿಡವನ್ನು ಕಾಣಬಹುದು. ಹೊಟ್ಟೆ ಉರಿ, ಬಾಯಿ ಹುಣ್ಣಿಗೆ ಶೀಘ್ರ ಪರಿಹಾರ :-). ಇದನ್ನು ಹಾಗೆಯೇ ಕುಡಿಯಬಹುದು ಅಥವಾ ಅನ್ನಕ್ಕೆ ಕಲಸಿ ತಿನ್ನಬಹುದು. ತಂಬೂಳಿ ತಯಾರಿಸುವುದು ಕೂಡ ಬಹಳ ಸುಲಭ.

ಬೇಕಾಗುವ ಸಾಮಾಗ್ರಿಗಳು:

೧) ಎಳಮುರಿ ಸೊಪ್ಪಿನ ಎಲೆಗಳು
೨) ಸ್ವಲ್ಪ ತೆಂಗಿನಕಾಯಿ ತುರಿ
೩) ಸ್ವಲ್ಪ ಜೀರಿಗೆ
೪) ಒಗ್ಗರಣೆ ಸಾಮಾಗ್ರಿಗಳು (ಸಾಸಿವೆ, ಕಡ್ಲೆ ಬೇಳೆ, ಘಾಟಿ ಮೆಣಸು, ಕರಿಬೇವು ಸೊಪ್ಪು)



ಮೊದಲು ಸೊಪ್ಪಿನ ಎಲೆಗಳನ್ನು ಬಿಡಿಸಿ, ಅದನ್ನು ತುಪ್ಪದೊಂದಿಗೆ ಬಾಣಲಿಯಲ್ಲಿ ಕರಿಯಿರಿ. ಸ್ವಲ್ಪ ಕಪ್ಪಾಗುವವರೆಗೆ ಕರಿಯಿರಿ. ಹೆಚ್ಚು ಕಪ್ಪಾಗಲು ಬಿಡಬೇಡಿ. ಕರಿದ ಸೊಪ್ಪಿಗೆ ಸ್ವಲ್ಪ ಜೀರಿಗೆ ಮತ್ತು ಸ್ವಲ್ಪ ತೆಂಗಿನಕಾಯಿ ತುರಿಯನ್ನು ಸೇರಿಸಿ  ಮಿಶ್ರಣ ಸಣ್ಣವಾಗುವರೆಗೆ ಮಿಕ್ಸಿಯಲ್ಲಿ ರುಬ್ಬಿ. ಹಾಗೆಯೇ ಪಕ್ಕದಲ್ಲಿ ಒಗ್ಗರಣೆಗೆ ತಯಾರಿ ನಡೆಸಿ. ಸಾಸಿವೆ, ಕಡ್ಲೆ ಬೇಳೆ, ಕರಿಬೇವು ಸೊಪ್ಪು ಮತ್ತು ಘಾಟಿ ಮೆಣಸು ಸರಿಯಾದ ಸಮಯಕ್ಕೆ ಸೇರಿಸಿ ತುಪ್ಪದಲ್ಲಿ ಕರಿಯಿರಿ. ಕೊನೆಗೆ ಒಗ್ಗರಣೆಯನ್ನು ತಂಬೂಳಿ ಮಿಶ್ರಣಕ್ಕೆ ಸೇರಿಸಿ ಅದಕ್ಕೆ ಬೇಕಾಗುವಷ್ಟು ಉಪ್ಪು ಹಾಕಿ. ಇಷ್ಟಾದಲ್ಲಿ ತಂಬೂಳಿ ಮುದ್ದೆ ತಯಾರು :-). ನಿಮಗೆ ಬೇಕಾದಷ್ಟು ಮುದ್ದೆಯನ್ನು ತೆಗೆದು ಅದಕ್ಕೆ ಮಜ್ಜಿಗೆ ಇಲ್ಲವೇ ಮೊಸರು ಸೇರಿಸಿ. ತಂಬೂಳಿಯನ್ನು ಅನ್ನಕ್ಕೆ ಕಲಸಿ ಉಂಡು ಆನಂದಿಸಿ :-).

ಮುದ್ದೆಯನ್ನು ಒಂದೆರಡು ದಿನ ತಂಪು ಪೆಟ್ಟಿಗೆಯಲ್ಲಿ ಇಡಬಹುದು. ಹೆಚ್ಚು ದಿನ ಇಟ್ಟರೆ ತೆಂಗಿನಕಾಯಿಯ ವಾಸನೆ ಹಬ್ಬುತ್ತದೆ. ಹಾಗೆ ಮಿಶ್ರಣಕ್ಕೆ ಸ್ವಲ್ಪವೇ ತೆಂಗಿನಕಾಯಿ ಸೇರಿಸಿದರೆ ಒಳ್ಳೆಯದು

Tuesday, July 30, 2013

ಮಜ್ಜಿಗೆ ಸೊಪ್ಪು ಚಹಾ

ಸಂಜೆ ಚಹಾ ಕುಡಿಯುವಾಗ ನೆನಪಾಗುವುದು ಅಮ್ಮ ಮಾಡಿಕೊಡುವ ಮಜ್ಜಿಗೆ ಸೊಪ್ಪು ಚಹಾ. ಕರಾವಳಿಯಲ್ಲಿ ಚಹಾಕ್ಕೆ ಫ್ಲೇವರ್ ಗಳಾಗಿ ಈ ಸೊಪ್ಪನ್ನು ಉಪಯೋಗಿಸುತ್ತಾರೆ.  ಕರಾವಳಿ/ಮಲೆನಾಡು ಭಾಗದ ತೆಂಗಿನ ಮರ ಇಲ್ಲವೇ ಬಾಳೆ ಗಿಡದ ಹಿತ್ತಲಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಈ ಸೊಪ್ಪಿಗೆ ಆರೈಕೆ ಕೂಡ ಅಗತ್ಯ. ಬಹಳಷ್ಟು ನೀರು ಹಾಗೂ ತಂಪಿನ ಜಾಗ ಅಗತ್ಯ. ಸೂರ್ಯನ ಕಿರಣಗಳು ಹೆಚ್ಚಾಗಿ ಬೀಳಕೂಡದು. ಮಳೆಗಾಲದಲ್ಲಿ ಸೊಂಪಾಗಿ ಬೆಳೆಯುತ್ತದೆ. ಈ ಸೊಪ್ಪನ್ನು ಶೀತವಾದವರಿಗೆ ಮಾಡುವ ಕಷಾಯದ ಅಂಶವಾಗಿ ಕೂಡ ಉಪಯೋಗಿಸುತ್ತಾರೆ. ಹಾಗೆ ಸ್ವಲ್ಪ ಹೀಟೂ ಕೂಡ ;-). ಕೀಳುವಾಗ ಸ್ವಲ್ಪ ಜಾಗ್ರತೆ ಕೂಡ ಬೇಕು. ಸೊಪ್ಪು ತೆಳ್ಳಗಾದರೂ ಬದಿಯಲ್ಲಿ ಸ್ವಲ್ಪ ಚೂಪು ಕೂಡ!

ಮಜ್ಜಿಗೆ ಸೊಪ್ಪು
ಚಹಾ ತಯಾರಿಸುವ ವಿಧಾನ:

ಮೊದಲು ನೀರಿನ ಜೊತೆ ೨ ಮಜ್ಜಿಗೆ ಸೊಪ್ಪನ್ನು ಸ್ವಲ್ಪ ಹೊತ್ತು ಬಿಸಿ ಮಾಡಿ, ಅದಕ್ಕೆ ಹಾಲು ಸೇರಿಸಿ ಚಹಾ ಮಾಡಿದರೆ ಆಹಾ!! ಬಿಸಿಬಿಸಿ ಘಮಘಮ ಚಹಾ ತಯಾರು. ಈ ಚಹಾವನ್ನು ಮಳೆ ವೀಕ್ಷಿಸುತ್ತಾ ಸವಿಯುವುದೇ ಒಂದು ಸುಂದರ ಅನುಭವ. ಮೂರು ಲೋಟೆ ಚಹಾಕ್ಕೆ ಮೂರು ಮಜ್ಜಿಗೆ ಸೊಪ್ಪು ಬಳ್ಳಿಗಳು ಸಾಕು. ಶುಂಠಿ ಚಹಾದಂತೆ ಕಂಡರೂ ಇದರ ಪರಿಮಳ ಮತ್ತು ರುಚಿ ವರ್ಣಿಸಲಾಗದು. ನಮ್ಮ ರೆಡ್ ಲೇಬಲ್ ಮಸಾಲೆ ಚಹಾದಂತೆ ಇರುತ್ತದೆ ;-).

Friday, May 10, 2013

ಹೀರೆಕಾಯಿ ಬಜ್ಜಿ

ನನ್ನ ಅಚ್ಚು ಮೆಚ್ಚಿನ ಬಜ್ಜಿ ಇದು :-). ಇದನ್ನು ಅನ್ನಕ್ಕೆ ಮಾತ್ರವಲ್ಲದೆ, ದೋಸೆ, ಇಡ್ಲಿ ಮತ್ತು ಚಪಾತಿ ಜೊತೆ ಕೂಡ ಬಳಸಬಹುದು. ಇದನ್ನು ತಯಾರಿಸುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ನಾನು ಮಾಡುವ ವಿಧಾನವನ್ನು ಇಲ್ಲಿ ಬರೆದಿದ್ದೇನೆ [ಅಮ್ಮ ಹೇಳಿಕೊಟ್ಟಿದ್ದು :-)].

ಬೇಕಾಗುವ ಸಾಮಾಗ್ರಿಗಳು:

೧) ಹೀರೆಕಾಯಿ - ೧ ಸಾಕು
೨) ತುರಿದ ತೆಂಗಿನಕಾಯಿ (ಬೇಕಾಗುವಷ್ಟು), ಒಣ ಹುಣಸೆ ಹಣ್ಣು, ಸಣ್ಣ ಬೆಲ್ಲದ ತುಂಡು, ಚಿಟಿಕೆ ಅರಶಿನ ಪುಡಿ
೩) ಒಗ್ಗರಣೆ ಸಾಮಾನುಗಳು (ಘಾಟಿ ಮೆಣಸು, ಕೊತ್ತಂಬರಿ, ಉದ್ದಿನ ಬೇಳೆ)
೪) ತೆಂಗಿನೆಣ್ಣೆ
೫) ೧ ಹಸಿಮೆಣಸು, ಸ್ವಲ್ಪ ಕರಿಬೇವು ಸೊಪ್ಪು



ಮೊದಲು ಪಾತ್ರೆಯಲ್ಲಿ ಹೀರೆಕಾಯಿಯನ್ನು ಸಣ್ಣಗೆ ತುಂಡರಿಸಿ ಇಡಿ(ತುಂಬಾ ಸಣ್ಣಗೆ ಅಲ್ಲ!). ಅದನ್ನು ತೊಳೆದು ನಂತರ ಬೇಕಾಗುವಷ್ಟು ನೀರು ಸೇರಿಸಿ. ನಂತರ ಅದಕ್ಕೆ ಹುಣಸೆ ಹಣ್ಣು, ಅರಿಶಿನ, ಬೆಲ್ಲ ಸೇರಿಸಿ, ಹೀರೆಕಾಯಿಯ ಮಿಶ್ರಣವನ್ನು ಬೇಯಿಸಿ. ಹೀರೆಕಾಯಿ ಮೆದುವಾಗುವವರೆಗೂ ಬೇಯಿಸಬೇಕು (ಸುಮಾರು ೧೫ ನಿಮಿಷ ತಗುಲಬಹುದು). ಬೇಯುತ್ತಿರುವಾಗಲೇ, ಪಕ್ಕದಲ್ಲಿ ಒಗ್ಗರಣೆಗೆ ತಯಾರಿ ನಡೆಸಿ. ಒಗ್ಗರಣೆ ಪಾತ್ರೆಯಲ್ಲಿ ಸುಮಾರು ೨ ಚಮಚ ತೆಂಗಿನೆಣ್ಣೆ ಸುರಿಯಿರಿ ನಂತರ ಅದಕ್ಕೆ ಮೇಲೆ ಬರೆದಂತೆ ಸಾಮಗ್ರಿಗಳನ್ನು ಸೇರಿಸಿ. ಉದ್ದಿನ ಬೇಳೆ ಕೆಂಪಾಗುವವರೆಗು ಕರಿಯಿರಿ.

ಹೀರೆಕಾಯಿ ಬೆಂದ ನಂತರ ಮಿಶ್ರಣವನ್ನು ಆರಲು ಬಿಡಿ. ತಣ್ಣಗಾದ ನಂತರ ಮಿಕ್ಸಿಯಲ್ಲಿ ತುರಿದ ತೆಂಗಿನಕಾಯಿ, ಬೇಯಿಸಿದ ಹೀರೆಕಾಯಿ, ಬೇಕಾಗುವಷ್ಟು ಉಪ್ಪು ಮತ್ತು ಒಗ್ಗರಣೆಯನ್ನು ಸೇರಿಸಿ ಚೆನ್ನಾಗಿ ರುಬ್ಬಿ. ನಂತರ ಅದಕ್ಕೆ ಹಸಿ ಮೆಣಸು ಮತ್ತು ಕರಿಬೇವು ಸೊಪ್ಪು ಸೇರಿಸಿ ಮಿಶ್ರಣ ಸಣ್ಣಗಾಗುವವರೆಗೆ ರುಬ್ಬಿ. ಇಷ್ಟಾದ ನಂತರ ರುಚಿಯಾದ ಬಜ್ಜಿ ತಯಾರು :). ಇದನ್ನು ಅನ್ನಕ್ಕೆ ಕಲಸಿ ತಿನ್ನಿ (ಸ್ವಲ್ಪ ತೆಂಗಿನೆಣ್ಣೆ ಜೊತೆ). ಇಲ್ಲವಾದಲ್ಲಿ ಮೊಸರನ್ನದೊಂದಿಗೆ ಕೂಡ ಬಳಸಬಹುದು.

ಕೆಲವು ಗಮನದಲ್ಲಿಡಬೇಕಾದ ಅಂಶಗಳು

೧) ಹೀರೆಕಾಯಿ ಬೇಯಿಸುವಾಗ ಬೇಕಾದಷ್ಟೇ ನೀರು ಸೇರಿಸಿ. ಇಲ್ಲವಾದಲ್ಲಿ ಬಜ್ಜಿ ತುಂಬಾ ನೀರಾಗುವುದು.
೨) ಹೀರೆಕಾಯಿ ಬೇಯಿಸಿದ ನಂತರ ನೀರನ್ನು ಚೆಲ್ಲಬೇಡಿ. ಅದೇ ನೀರನ್ನು ಬಜ್ಜಿ ತಯಾರಿಸುವುದಕ್ಕೆ ಉಪಯೋಗಿಸಬೇಕು.
೩) ಸಣ್ಣ ತುಂಡಿನ ಬೆಲ್ಲವನ್ನು ಹಾಕಿ. ಇಲ್ಲವಾದಲ್ಲಿ ಬಜ್ಜಿ ಸಿಹಿಯಾಗಿಬಿಡುತ್ತದೆ! ಹಾಗೆ ಹಸಿ ಮೆಣಸು ಕೂಡ ಸಣ್ಣ ಪ್ರಮಾಣದಲ್ಲಿ ಸೇರಿಸಿ.
೪) ಒಗ್ಗರಣೆ ತೆಂಗಿನ ಎಣ್ಣೆಯದ್ದು ಆದರೆ ಒಳ್ಳೆಯದು. ಅದರ ರುಚಿಯೇ ಬೇರೆ ;-)

Tuesday, April 16, 2013

ಅಣ್ಣಾ ಚಾ ಅಂಪುಣನಾ!

೧೪ ಏಪ್ರಿಲ್ ೨೦೧೩ 

ಬೆಳಿಗ್ಗೆ ಮಾಮೂಲು ಬಸ್ಸಿನವ ೮ನೇ ಮೈಲಿಗಿಂತ ಮುಂಚೆಯೆ ನನ್ನನ್ನು ಇಳಿಸಿದ. ಯಾವಾಗಲೂ ಕೋರಮಂಗಲದಲ್ಲಿ ಇಳಿಯುವವನು ಅದ್ಯಾಕೆ ಇಲ್ಲಿಳಿದ  ಎನ್ನುವುದು ಪರಿಚಯವಿರುವ ಕ್ಲೀನರಿಗೂ ಸ್ವಲ್ಪ ಕಂಫ್ಯೂಸ್ ಆಯಿತು ಕೂಡ. ಅಲ್ಲೇ ಇಳಿದು ಯಾವುದೋ ಸಿಟಿ ಬಸ್ಸನ್ನು ಹತ್ತಿ ಕುಳಿತೆ.  ಮೆಜೆಸ್ಟಿಕ್ಕಿಗೆ ಒಂದು ಟಿಕೇಟ್ ಕೊಡಿ ಎಂದೆ. ಮೆಜೆಸ್ಟಿಕ್ ಹೋಗಲ್ಲ ಕಣ್ರಿ ಅಂತ ಕಂಡಕ್ಟರ್ ಜೋರು ಮಾಡಿದರು. ಅರೆ ನಾನೇಕೆ ಇಲ್ಲಿಳಿದು ಸಿಟಿ ಬಸ್ ಹತ್ತಿದೆ ಎಂಬುದು ಕೂಡ ತೋಚಲಿಲ್ಲ. ಬೆಳಿಗ್ಗೆ ನನಗೇನು ಆಗಿದೆ ಅಂತ ದಿಗಿಲಾಯಿತು. ಸರಿ ಮುಂದಿನ ಸ್ಟಾಪಿನಲ್ಲಿ ಇಳಿದೆ. ಇಳಿದ  ತಕ್ಷಣ ರಸ್ತೆ ಖಾಲಿಯಾಗಲು ಶುರುವಾಯಿತು. ಅರೆ ಒಂದು ಬಸ್ಸಿಲ್ಲ ಅಥವಾ ರಿಕ್ಷಾ ಕೂಡ ಇಲ್ಲ. ಅಯ್ಯಯ್ಯೋ ನನ್ನ ಇನ್ನೊಂದು ಬ್ಯಾಗ್ ಬಸ್ಸಲ್ಲೇ ಉಳಿದುಬಿಟ್ಟಿದೆ. ಮನೆಯ ಕೀ ಕೂಡ ಅದರಲ್ಲೇ ಇದೆ. ಇನ್ನೇನ್ನಪ್ಪಾ ಮಾಡೋದು ಅಂತ ಬಸ್ ಏಜೆಂಸಿಗೆ ಫೋನಾಯಿಸಿದೆ.  ಇನ್ನೇನು ಹಲೋ ಅನ್ನುವಷ್ಟರಲ್ಲಿ ಮೊಬೈಲ್ ಸ್ವಿಚ್ ಆಫ್ ಆಯಿತು. ನೋಡಿದರೆ ಚಾರ್ಜ್ ಢಮಾರ್. ಗಾಬರಿಯಿಂದ ಹಾಗೆ ನಡೆದಂತೆ ಯಾವುದೋ ಮುಷ್ಕರ ನಡೆಯುತ್ತಿದೆ ಎನ್ನುವಂತೆ ಭಾಸವಾಯಿತು. ಸ್ವಲ್ಪ ನಡೆದು ಯಾವುದೋ ಗಲ್ಲಿಗೆ ಬಂದೆ. ಸುತ್ತ ಜನರು ನನ್ನನ್ನೇ ದುರುಗುಟ್ಟಿ ನೋಡುತ್ತಿದ್ದರು. ಹಾಗೇ ಮುಂದುವರೆಯುತ್ತಿದ್ದಂತೆ ಜನರ ಗುಂಪೊಂದು ನನ್ನ ಬಳಿಗೆ ವೇಗವಾಗಿ ಬರುತ್ತಿತ್ತು. ನನಗೆ ಅಲ್ಲೇ ಕತ್ತಲೆ ಕವಿದಂತಾಯಿತು. ಅಷ್ಟರಲ್ಲಿ ಯಾರೋ ಕೂಗಿ ಕೇಳಿದರು "ಅಣ್ಣಾ ಚಾ  ಅಂಪುಣನಾ" [ಚಾ ಮಾಡುವುದಾ] ಎಂದು. ನನಗೆ ಒಮ್ಮೆಲೇ ಬೆಳಕು ಆವರಿಸಿದಂತಾಗಿ ನಿದ್ದೆಯಿಂದ ಎದ್ದೆ. ಅಬ್ಬಬ್ಬಾ ಎಂತದು ಮಾರಾಯ್ರೇ ಅದು. ಯುಗಾದಿಯ ದಿನ ಹೀಗೆಯೇ :(. ಹುಸ್ಸಪ್ಪಾ ಕನಸಿನಲ್ಲೇ ಮುಗಿಯಿತಲ್ವಾ ಅಂತ ಸಮಯ ನೋಡಿದಾಗ ಘಂಟೆ ಏಳಾಗಿತ್ತು. ಇಷ್ಟು ತಡ, ಅದು ಹಬ್ಬದ ದಿನ. ಸರಿಹೋಯ್ತು ಅಂತ ನಿಟ್ಟುಸಿರುಬಿಡುತ್ತಾ ಚಾಪೆ ಮಡಚಿ ಮೆಟ್ಟಿಲಿನಿಂದ ಕೆಳಗಿಳಿದೆ. ಅಮ್ಮ ಕರೆಯದಿದ್ದರೆ ಇನ್ನು ಏನೇನು ಆಗುತ್ತಿತ್ತೋ ಎಣಿಸಲು ಆಗುತ್ತಿಲ್ಲ.

Sunday, April 7, 2013

ಮಟ್ಟು ಗುಳ್ಳ ಮೊಸರು ಬಜ್ಜಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿಶೇಷ ತರಕಾರಿ ಮಟ್ಟು ಗುಳ್ಳ. ಇದರ ಪಲ್ಯ ಮತ್ತು ಹುಳಿ ಎಷ್ಟು ಪ್ರಸಿದ್ಧಿಯೋ, ಅಷ್ಟೇ ರುಚಿಕರ ಈ ಮೊಸರು ಬಜ್ಜಿ. ಹಾಗಾಗಿ ಈ ವಾರದ ರುಚಿ ಮಟ್ಟು ಗುಳ್ಳ ಮೊಸರು ಬಜ್ಜಿ :-). ಇದನ್ನು ತಯಾರಿಸುವುದು ಬಹಳ ಸುಲಭ ಕೂಡ.

ಮೊಸರು ಬಜ್ಜಿ :-)
ಬೇಕಾಗುವ ಸಾಮಾಗ್ರಿಗಳು:

೧) ಮಟ್ಟು ಗುಳ್ಳ (೨)
೨) ಮೊಸರು ಬೇಕಾದಷ್ಟು
೩) ಒಗ್ಗರಣೆ ಸಾಮಾಗ್ರಿಗಳು (ಸಾಸಿವೆ, ಕಡಲೆ ಬೇಳೆ, ಕರಿಬೇವು ಸೊಪ್ಪು)
೪) ೨ ಹಸಿಮೆಣಸು
೫) ಸ್ವಲ್ಪ ಹಿಂಗು

ತಯಾರಿಸುವ ವಿಧಾನ:

ಮೊದಲು ಗುಳ್ಳವನ್ನು ತುಂಡರಿಸಿ (ಸ್ವಲ್ಪ ದೊಡ್ಡದಾಗಿ!) ೨ ಘಂಟೆ ನೀರಿನಲ್ಲಿ ನೆನೆಸಿ. ನೆನೆಸದಿದ್ದರೆ ಬಜ್ಜಿ ಕಪ್ಪಾಗುತ್ತದೆ. ಕೆಲವೊಮ್ಮೆ ಗುಳ್ಳದ ಕಹಿ ಕೂಡ ಹಾಗೆ ಉಳಿಯುತ್ತದೆ. ನೆನೆಸಿದ ನಂತರ ನೀರನ್ನು ಚೆಲ್ಲಿ, ಹೊಸ ನೀರನ್ನು ಸೇರಿಸಿ ಮಟ್ಟು ಗುಳ್ಳವನ್ನು ಬೇಯಿಸಿ. ಗುಳ್ಳ ಮೆದುವಾಗುವವರೆಗೆ ಬೇಯಿಸಿ (ಬಣ್ಣ ಬದಲಾದಾಗ ತಿಳಿಯುತ್ತದೆ). ನಂತರ ನೀರನ್ನು ಚೆಲ್ಲಿ, ಸ್ವಲ್ಪ ತಣ್ಣಗಾಗಲು ಬಿಡಿ. ಹಾಗೆ ಸಣ್ಣ ಪಾತ್ರೆಯಲ್ಲಿ ಸ್ವಲ್ಪ ಹಿಂಗಿಗೆ (ಅಂಟು ಹಿಂಗು) ನೀರು ಬೆರೆಸಿ ಬದಿಯಲ್ಲಿಡಿ. ಗುಳ್ಳ ಬೇಯಿಸಿದ ಪಾತ್ರೆಗೆ ಬೇಕಾಗುವಷ್ಟು ಮೊಸರು ಮತ್ತು ಉಪ್ಪನ್ನು ಸೇರಿಸಿ. ಹಸಿಮೆಣಸನ್ನು ಸಣ್ಣಗೆ ತುಂಡರಿಸಿ ಪಾತ್ರೆಗೆ ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಕೈಯಲ್ಲಿ ಹಿಚುಕಿ. ಇದಕ್ಕೆ ಹಿಂಗಿನ ನೀರನ್ನು ಸೇರಿಸಿ. ನಂತರ ಒಗ್ಗರಣೆಯನ್ನು ಸೇರಿಸಿದರೆ ರುಚಿಯಾದ ಬಜ್ಜಿ ತಯಾರು :-). ಕೆಲವರು ಇದಕ್ಕೆ ರುಬ್ಬಿದ ತೆಂಗಿನಕಾಯಿ ಮಿಶ್ರಣವನ್ನು ಸೇರಿಸುತ್ತಾರೆ. ಇದರಿಂದ ರುಚಿ ಮತ್ತಷ್ಟು ವೃದ್ಧಿಸುವುದು ಕೂಡ. ಬಜ್ಜಿ ತಯಾರಾದ ನಂತರ ಅನ್ನಕ್ಕೆ ಕಲಸಿ ಉಂಡು ಆನಂದಿಸಿ ;-).

Sunday, March 24, 2013

ಚುರುಮುರಿ (Churumuri)

ಸಂಜೆ ಕಾಫಿ ಜೊತೆಗೆ ನನ್ನ ಅಚ್ಚುಮೆಚ್ಚಿನ ತಿಂಡಿ ಚುರುಮುರಿ. ಕರಾವಳಿಯ ಮಳೆಗೆ ಸರಿಯಾದ ಹೊಂದಾಣಿಕೆ. ಇದನ್ನು ತಯಾರಿಸುವುದು ಕೂಡ ಬಹಳ ಸುಲಭ. ನಾನು ತಯಾರಿಸುವ ವಿಧಾನವನ್ನು ಇಲ್ಲಿ ಬರೆದಿದ್ದೇನೆ.

ಬೇಕಾಗುವ ಸಾಮಾಗ್ರಿಗಳು:

೧) ೨ ಟೊಮ್ಯಾಟೋ (ಗಾತ್ರ ದೊಡ್ಡದಾಗಿದ್ದಾರೆ ಒಂದು ಸಾಕು)
೨) ೨ ಈರುಳ್ಳಿ
೩) ಮೆಣಸಿನ ಪುಡಿ
೪) ನಿಂಬೆಹಣ್ಣು - ಅರ್ಧಸಾಕು
೫) ತೆಂಗಿನಎಣ್ಣೆ
೬) ಸ್ವಲ್ಪ ಮಿಕ್ಶರ್
೫) ಸ್ವಲ್ಪ ತುರಿದ ಕ್ಯಾರೆಟ್
೬) ಮಂಡಕ್ಕಿ.

ತಯಾರಿಸುವ ವಿಧಾನ:

ಮೊದಲು ಟೊಮ್ಯಾಟೋ ಮತ್ತು ಈರುಳ್ಳಿಯನ್ನು ಸಣ್ಣಗೆ ತುಂಡರಿಸಬೇಕು. ಸಣ್ಣ ಪಾತ್ರೆಯಲ್ಲಿ ೪ ಚಮಚ ತೆಂಗಿನ ಎಣ್ಣೆಯನ್ನು ಸುರಿಯಿರಿ. ಅದಕ್ಕೆ ರುಚಿಗೆ ಬೇಕಾದಷ್ಟು ಉಪ್ಪು ಮತ್ತು ಮೆಣಸಿನ ಪುಡಿ ಸೇರಿಸಿ. ನಂತರ ತುಂಡರಿಸಿದ ಟೊಮ್ಯಾಟೋ, ತುರಿದ ಕ್ಯಾರೆಟ್ ಮತ್ತು ಈರುಳ್ಳಿಯನ್ನು ಸೇರಿಸಿ. ಮಿಶ್ರಣವನ್ನು ಚೆನ್ನಾಗಿ ಕಲಸಿ ನಂತರ ಅದಕ್ಕೆ ನಿಂಬೆಹಣ್ಣು ರಸ ಹಿಂಡಿ.  ಈಗ ಬೇಕಾದಷ್ಟು ಮಂಡಕ್ಕಿ ಸೇರಿಸಿ ಚೆನ್ನಾಗಿ ಕಲಸಿ. ಅದಕ್ಕೆ ಸ್ವಲ್ಪ ಮಿಕ್ಶರ್ ಸೇರಿಸಿ ಮತ್ತೆ ಕಲಸಿ. ರುಚಿಯಾದ ಚುರುಮುರಿ ತಯಾರು :-).



ತಯಾರಾದ ತಕ್ಷಣವೇ ತಿನ್ನಿ ಇಲ್ಲವಾದಲ್ಲಿ ಮಂಡಕ್ಕಿ ಮೆದುವಾಗುತ್ತದೆ. ಆದಷ್ಟು ಕೊನೆಗೆ ಮಂಡಕ್ಕಿ ಸೇರಿಸಿ. ಮೆಣಸಿನ ಪುಡಿ ಮತ್ತು ತರಕಾರಿ ನಿಮಗೆ ಬೆಕಾಗುವಷ್ಟು ಸೇರಿಸಿ. ಇಲ್ಲಿ ನಾನು ಬರೆದಿದ್ದು ಒಬ್ಬರಿಗೆ ಬೇಕಾಗುವಷ್ಟು ಮಾತ್ರ. ನಿಮ್ಮ ಬೇಡಿಕೆಗೆ ತಕ್ಕಂತೆ ಬದಲಾಯಿಸಿ. ಚುರುಮುರಿಗೆ ತುರಿದ ಮಾವಿನಕಾಯಿ ಮತ್ತು ಸೌತೆಕಾಯಿ ಕೂಡ ಸೇರಿಸಬಹುದು. ಸೌತೆಕಾಯಿಯಲ್ಲಿ ನೀರಿನ ಅಂಶ ಇರುವುದರಿಂದ ನಾನು ಹೆಚ್ಚಾಗಿ ಬಳಸುವುದಿಲ್ಲ.

Wednesday, February 20, 2013

ಟೋಮಾಟೊ ತಂಬೂಳಿ

ಬಹಳ ಸುಲಭವಾಗಿ ತಯಾರಿಸಬಹುದಾದ ತಂಬೂಳಿ! ಬೇಗನೆ ತಯಾರಿಸಬಹುದು ಕೂಡ.

ಬೇಕಾಗುವ ಸಾಮಾಗ್ರಿಗಳು:

೧) ಮೊಸರು : ಬೇಕಾದಷ್ಟು
೨) ಒಗ್ಗರಣೆ ಪದಾರ್ಥಗಳು: ಸಾಸಿವೆ, ಉದ್ದಿನ ಬೇಳೆ, ಬ್ಯಾಡಗಿ ಮೆಣಸು, ಕರಿಬೇವು ಸೊಪ್ಪು.
೩) ಟೋಮಾಟೊ : ಬೇಕಾಗುವಷ್ಟು.

ಮೊದಲು ಬಾಣಲಿಯಲ್ಲಿ ತುಪ್ಪ ಅಥವಾ ಎಣ್ಣೆಯಲ್ಲಿ ಒಗ್ಗರಣೆ ತಯಾರಿಸಿ. ತಯಾರಾದ ಒಗ್ಗರಣೆಗೆ ತುರಿದ ಟೋಮಾಟೊ ಸೇರಿಸಿ. ಟೋಮಾಟೊ ಹದವಾಗುವಷ್ಟು ಫ್ರೈ ಮಾಡಿ. ಒಂದು ತಟ್ಟೆಯಲ್ಲಿ ಮೊಸರು ಮತ್ತು ಅದಕ್ಕೆ ಬೇಕಾಗುವಷ್ಟು ಉಪ್ಪು ಸೇರಿಸಿಡಿ. ನಂತರ ಬಾಣಲಿಯಲ್ಲಿನ ಮಿಶ್ರಣವನ್ನು ಮೊಸರಿನ ತಟ್ಟೆಗೆ ಸೇರಿಸಿ ಚೆನ್ನಾಗಿ ಕಲಸಿ. ರುಚಿಯಾದ ತಂಬೂಳಿ  ತಯಾರು! ನಂತರ ಅನ್ನದೊಂದಿಗಿ ಕಲಸಿ ಆನಂದಿಸಿ :-)

ಟೋಮಾಟೊ ತಂಬೂಳಿ

Saturday, October 13, 2012

ಅವಲಕ್ಕಿ ಒಗ್ಗರಣೆ

ಇಂದಿನ ತಿಂಡಿ ಅವಲಕ್ಕಿ ಒಗ್ಗರಣೆ! ಸಾಮಾಗ್ರಿಗಳು ಇದ್ದರೆ 15 ನಿಮಿಷದ ಕೆಲಸ ಅಷ್ಟೇ ;). ನಾನು ತಯಾರಿಸುವ ವಿಧಾನವನ್ನು ಇಲ್ಲಿ ಬರೆದಿದ್ದೇನೆ. ಮಹಾರಾಷ್ಟ್ರದಲ್ಲಿ ಇದನ್ನು ವಿಭಿನ್ನ ರೀತಿಯಲ್ಲಿ ತಯಾರಿಸುತ್ತಾರೆ.

ಬೇಕಾಗುವ ಸಾಮಾಗ್ರಿಗಳು:

1) ದಪ್ಪ ಅವಲಕ್ಕಿ - 3/4 ಲೋಟೆ
2) ಒಗ್ಗರಣೆ ಸಾಮಾಗ್ರಿಗಳು (ಎಣ್ಣೆ, ಸಾಸಿವೆ, ಕಡಲೆ ಬೇಳೆ, ಶೇಂಗಾ, ಘಾಟಿ ಮೆಣಸು, ಕರಿಬೇವು ಸೊಪ್ಪು)
3) ಹುಣಸೆ ಹಣ್ಣಿನ ನೀರು
4) ಸ್ವಲ್ಪ ಬೆಲ್ಲ
5) ಸ್ವಲ್ಪ ತುರಿದ ತೆಂಗಿನಕಾಯಿ

ಅವಲಕ್ಕಿ ಒಗ್ಗರಣೆ
ಮೊದಲು ದಪ್ಪ ಅವಲಕ್ಕಿಯನ್ನು ತೊಳೆದು 5 ನಿಮಿಷ ನೆನೆಯಲು ಬಿಡಿ. ನಂತರ ನೀರನ್ನು ಚೆಲ್ಲಿ ಸೋಸಲು ಇಡಿ (ಒಣಗಲಿಕ್ಕಾಗಿ). ಇದೆ ಸಮಯದಲ್ಲಿ ಬಾಣಲಿಯಲ್ಲಿ ಒಗ್ಗರಣೆಗೆ ಇಡಿ. ತುಪ್ಪದ ಒಗ್ಗರಣೆಯಾದರೆ ರುಚಿ ವೃದ್ಧಿಸುವುದು. ಸಾಸಿವೆ, ಕಡಲೆ ಬೇಳೆ, ಶೇಂಗಾ, ಮೆಣಸು, ಕರಿಬೇವು ಸೊಪ್ಪು ಸರಿಯಾದ ಸಮಯಕ್ಕೆ ಒಗ್ಗರಣೆಗೆ ಹಾಕಿ ಬೇಕಾದಷ್ಟು ಫ್ರೈ ಮಾಡಿ. ತದನಂತರ ಹುಣಸೆ ಹಣ್ಣಿನ ನೀರನ್ನು ಒಗ್ಗರಣೆಗೆ ಹಾಕಿ. ನೀರನ್ನು ಬಿಸಿ ಒಗ್ಗರಣೆಗೆ ಹಾಕುವುದರಿಂದ ಸ್ವಲ್ಪ ಮೆಲ್ಲನೆ ಜಾಗರೂಕತೆಯಿಂದ ಹಾಕಿ. ನೀರಿನ ಮಿಶ್ರಣಕ್ಕೆ ತುಂಡು ಬೆಲ್ಲ ಸೇರಿಸಿ. ಕಡೆಗೆ ಸ್ವಲ್ಪ ಉಪ್ಪು ಹಾಗು ಚಿಟಿಕೆ ಅರಿಶಿನ ಪುಡಿ ಸೇರಿಸಿ ಕುದಿಯಲು ಬಿಡಿ. ಸಿಮ್ಮಿನಲ್ಲಿ ಕುದಿಸಿ. ನೀರಿನ ರುಚಿಯನ್ನು ಗಮನಿಸಿ ಬೇಕಾದನ್ನು ಹಾಕಿ. ನೀರು ದಪ್ಪ ದ್ರವವಾಗುವವರೆಗೆ ಕುದಿಸಿ . ತದನಂತರ ಸೋಸಿದ ಅವಲಕ್ಕಿಯನ್ನು ಬಾಣಲಿಗೆ ಸುರಿದು ಮಿಶ್ರಣವನ್ನು ಚೆನ್ನಾಗಿ ಕಲಸಿ. ನೀರು  ಆವಿಯಾದ ಮೇಲೆ ಗ್ಯಾಸ್ ಬಂದು ಮಾಡಿ. ನಂತರ ಇದಕ್ಕೆ ಸ್ವಲ್ಪ ತುರಿದ ತೆಂಗಿನಕಾಯಿ ಸೇರಿಸಿದರೆ ರುಚಿಯಾದ ತಿಂಡಿ ತಯಾರು :-).

ಅವಲಕ್ಕಿ ಒಗ್ಗರಣೆಯನ್ನು ಚಿಪ್ಸ್ ಅಥವಾ ಮಿಕ್ಷರ್ ಜೊತೆ ತಿನ್ನಬಹುದು. ಕಡೆಗೆ ಸ್ವಲ್ಪ ಮೊಸರಿನ ಜೊತೆ ತಿನ್ನಿ. ಇದಕ್ಕೆ ಪೇಪರ್ ಅವಲಕ್ಕಿ ಕೂಡ ಉಪಯೋಗಿಸಬಹುದು. ಇದನ್ನು ಉಪಯೋಗಿಸಲು ಸ್ವಲ್ಪ ಅಭ್ಯಾಸ ಇರಬೇಕು. ಇಲ್ಲವಾದಲ್ಲಿ ಮುದ್ದೆಯಾಗಿಬಿಡುತ್ತದೆ. ಯಾಕೆಂದರೆ ಪೇಪರ್ ಅವಲಕ್ಕಿಯನ್ನು ನೀರಿನಲ್ಲಿ ತೊಳೆದ ತಕ್ಷಣವೇ ಉಪಯೋಗಿಸಬೇಕು, ನೆನೆಸಿಡಬಾರದು.ಈ ತಿಂಡಿಗೆ ಕೆಲವರು ಈರುಳ್ಳಿ ಮತ್ತು ಬಟಾಟೆಯಯನ್ನು ಕೂಡ ಉಪಯೋಗಿಸುತ್ತಾರೆ.

ಚಿತ್ರ: ನಾನು ಮಾಡಿದ ತಿಂಡಿ :-)

Wednesday, October 10, 2012

ನೀರು ದೋಸೆ

ಇವತ್ತು ನೀರು ದೋಸೆ ತಯಾರಾಗುತ್ತಿದೆ. ತಯಾರಿನ ಮಧ್ಯದಲ್ಲಿ ಒಂದು ಸಣ್ಣ ಬರಹ. ಕರಾವಳಿಯಲ್ಲಿ ಹೆಚ್ಚಾಗಿ ಕಂಡು ಬರುವ ದೋಸೆ ಇದು. ಇದನ್ನು ತಯಾರಿಸುವುದು ಬಹಳ ಸುಲಭ ಆದರೆ ಕಾವಲಿಯಲ್ಲಿ ಹಾಯಿಸುವುದು ಸ್ವಲ್ಪ ಕಷ್ಟ (ಮೊದಲ ಬಾರಿ ಮಾತ್ರ). ಇದನ್ನು ತಯಾರಿಸುವ ಬಗ್ಗೆ ಇಲ್ಲಿ ಬರೆದಿದ್ದೇನೆ. ಈ ದೋಸೆ ಹೆಚ್ಚಿನವರು (ನನ್ನಂತವರು) ಕನಿಷ್ಠ ೭ ರವರೆಗೆ ತಿನ್ನುತ್ತಾರೆ. ಆದರೆ ಇದು ಬೇಗ ಕರಗುವುದರಿಂದ, ಮಧ್ಯಾಹ್ನದ ವೇಳೆಗೆ ಬಹಳ ಬೇಗ ಹಸಿವಾಗುತ್ತದೆ.

ನೀರು ದೋಸೆ

ಮೊದಲು ಊಟದ ಅಕ್ಕಿಯನ್ನು ಸುಮಾರು ೫-೬ ಘಂಟೆ ನೆನೆಸಿಡಿ. ನಂತರ ಅಕ್ಕಿಯನ್ನು ರುಬ್ಬಿ. ರುಬ್ಬುವಾಗ ನೀರು ಹದವಾಗಿ ಸೇರಿಸಿ. ತುಂಬಾ ನೀರಾದರೆ ದೋಸೆ ಎಬ್ಬಿಸುವುದು ಕಷ್ಟವಾಗುವುದು. ರುಬ್ಬುವ ಮಧ್ಯದಲ್ಲಿ ಸ್ವಲ್ಪ ತುರಿದ ತೆಂಗಿನಕಾಯಿ ಸೇರಿಸಿ. ಇದು ದೋಸೆಯನ್ನು ಬಹಳ ಮೆದುವಾಗಿಸುತ್ತದೆ. ಜಾಸ್ತಿ ಹಾಕಿದರೆ ಮತ್ತೆ ದೋಸೆ ಎಬ್ಬಿಸುವುದು ಕಷ್ಟವಾಗುತ್ತದೆ. ಸುಮಾರು ೪೫ ನಿಮಿಷ ರುಬ್ಬಿದ ನಂತರ ಬೇಕಾದಷ್ಟು ನೀರು ಸೇರಿಸಿ ಜೊತೆಗೆ ರುಚಿಗೆ ತಕ್ಕ ಉಪ್ಪು ಹಾಕಿ. ಇದನ್ನು ತಕ್ಷಣವೇ ಉಪಯೋಗಿಸಬಹುದು. ನಾನ್-ಸ್ಟಿಕ್ ಕಾವಲಿ ಬಳಸಿದರೆ ಉತ್ತಮ. ದೋಸೆ ಚೆನ್ನಾಗಿ ಎಬ್ಬಿಸಲು ಬರುತ್ತದೆ. ಬ್ಯಾಚುಲರ್ ಆದ ನನಗೆ ೧ ಲೋಟೆ ಅಕ್ಕಿಯ ಮಿಶ್ರಣ ಸುಮಾರು ಮೂರು ಹೊತ್ತಿಗೆ ಸಾಕಾಗುತ್ತದೆ.

ಮಿಶ್ರಣ ತಯಾರಾದ ನಂತರ, ಕಾವಲಿ ಬಿಸಿಯಾಗುವ ತನಕ ಕಾಯಿರಿ. ಜೊತೆಗೆ ಎಣ್ಣೆಯನ್ನು ಹರಡಿ. ಸಣ್ಣಗೆ ತೆಳುವಾಗಿ ದೋಸೆ ಹಾಯಿಸಿ. ನಂತರ ಕಾವಲಿಯನ್ನು ಮುಚ್ಚಬೇಕು. ಸುಮಾರು ೨೦ ಸೆಕಂಡಿನ ನಂತರ ಮುಚ್ಚಳ ತೆಗೆದು ಮೆಲ್ಲನೆ ದೋಸೆ ತೆಗೆಯಿರಿ. ಗ್ಯಾಸ್ ನ ಬೆಂಕಿ ಸ್ವಲ್ಪ ಜಾಸ್ತಿ ಇದ್ದರೆ ಒಳ್ಳೆಯದು. ದೋಸೆಯನ್ನು ತುರಿದ ತೆಂಗಿನಕಾಯಿ ಮತ್ತು ಬೆಲ್ಲದ ಮಿಶ್ರಣದ ಜೊತೆಗೆ ತಿಂದರೆ ಬಹಳ ರುಚಿ. ಅದರ ಜೊತೆ ಮಾವಿನಹಣ್ಣು ರಸಾಯನ, ಬೆಣ್ಣೆ ಕೂಡ ಉತ್ತಮ ಕಾಂಬಿನೇಶನ್. ಕಡೆಗೆ 2 ದೋಸೆಯನ್ನು ಮೊಸರಿನೊಂದಿಗೆ ತಿನ್ನಿ. ಇದರ ಒಂದೆ ತೊಂದರೆಯೆಂದರೆ, ದೋಸೆ ಹಾಯಿಸುವಾಗ ಸುತ್ತಲೂ ಅದರ ಮಿಶ್ರಣ ಹರಡುತ್ತದೆ. ಪದೇ ಪದೇ ಕ್ಲೀನ್ ಮಾಡುವುದೇ ಕೆಲಸವಾಗುತ್ತದೆ.

ಚಿತ್ರ: ನಾನು ತಯಾರು ಮಾಡಿದ ನೀರು ದೋಸೆ :-)

Sunday, July 29, 2012

ಮಳೆಗಾಲಕ್ಕೊಂದು ಕರಾವಳಿಯ ಕಷಾಯ

ಮಳೆಗಾಲವೆಂದರೆ ಕರಾವಳಿಯಲ್ಲಿ ಅನೇಕ ರೋಗಗಳ ಆಗಮನ ಕೂಡ. ರೋಗ ಅಂದರೆ ವಿಚಿತ್ರರೋಗಗಳಲ್ಲ, ಬದಲಾಗಿ ಶೀತ, ಕೆಮ್ಮು, ವಾತ, ಪಿತ್ತ ಮುಂತಾದವು. ಇದಕ್ಕೆ ಕರಾವಳಿಯವರು ಕಂಡುಕೊಂಡ ಪರಿಹಾರ ಕಾಲಕಾಲಕ್ಕೆ ಕೆಲವನ್ನು ಸೇವಿಸದೇ ಇರುವುದು. ಉದಾಹರಣೆಗೆ: ಆಷಾಡ ಮಾಸದ ಮಳೆ ಮತ್ತು ಚಳಿ ಸಮಯದಲ್ಲಿ ಮೊಸರು ಸೇವಿಸದೇ ಇರುವುದು, ಕೆಲವೊಮ್ಮೆ ಬೇಳೆ ಸೇವಿಸದೇ ಇರುವುದು ಮುಂತಾದವು. ಹಿಂದಿನ ಕಾಲದಲ್ಲಿ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಇಂತಹ ವೃತಗಳನ್ನು ಆಚರಣೆಗೆ ತಂದಿದ್ದಾರೆ. ಮತ್ತೊಂದು ಪರಿಹಾರ ಎಂದರೆ ಮನೆಯಲ್ಲೇ ತಯಾರಿಸಿದ ಕೊತ್ತಂಬರಿ-ಜೀರಿಗೆ ಕಷಾಯ. ಇದು ದೇಹವನ್ನು ತಂಪಾಗಿಡುತ್ತಲ್ಲದೇ, ಶೀತ-ಕೆಮ್ಮಿನಿಂದಲೂ ದೂರವಿಡುತ್ತದೆ. ಕರಾವಳಿಯ ಹಳ್ಳಿಗಳಲ್ಲಿ ಮಾತ್ರವಲ್ಲ ಬದಲಾಗಿ ನಗರ ಪ್ರದೇಶಗಳಾದ ಉಡುಪಿ, ಮಂಗಳೂರಿನಲ್ಲೂ ಹಲವರು ಈ ಕಷಾಯ ಸಿದ್ಧಪಡಿಸುತ್ತಾರೆ. ಈ ಕಷಾಯ ಪುಡಿಯನ್ನು ಮಾಡುವುದು ಬಹು ಸುಲಭ

ಬೇಕಾಗುವ ಸಾಮಾಗ್ರಿಗಳು:
೧) ಕೊತ್ತಂಬರಿ - ೧ ಲೋಟೆ
೨) ಜೀರಿಗೆ - ಅರ್ಧ ಲೋಟೆ
೩) ಬಡಸೊಪ್ಪು - ಕಾಲು ಲೋಟೆ
೪) ಮೆಂತೆ - ಸ್ವಲ್ಪ ಸಾಕು (೧/೧೦ ಲೋಟೆ)
೫) ಕರಿಮೆಣಸು - ಸ್ವಲ್ಪ ಸಾಕು (೧/೧೦ ಲೋಟೆ). ಖಾರ ಹೆಚ್ಚು ಬೇಕಾದರೆ ಸ್ವಲ್ಪ ಹೆಚ್ಚಿಗೆ ಹಾಕಬಹುದು.

ಮಾಡುವ ವಿಧಾನ:
ಮೊದಲು ಮಿಶ್ರಣವನ್ನು ಬಾಣಲಿಯಲ್ಲಿ ಹಾಕಿ, ಸ್ವಲ್ಪ ಹೊತ್ತು ಬಿಸಿ ಮಾಡಬೇಕು. ಮಿಶ್ರಣ ಕಪ್ಪಾಗದಂತೆ ನೋಡಿಕೊಳ್ಳಬೇಕು. ಸ್ವಲ್ಪ ಬಿಸಿ ಮಾಡಿದರೆ ಸಾಕು. ನಂತರ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ಸಣ್ಣಗೆ ಪುಡಿ ಮಾಡಬೇಕು. ಇಷ್ಟು ಮಾಡಿದರೆ ಕಷಾಯ ಪುಡಿ ತಯಾರು.

ಕಷಾಯ ಮಾಡುವ ವಿಧಾನ:
ಮೊದಲು ತಟ್ಟೆಯಲ್ಲಿ ಒಂದು ಲೋಟೆ ನೀರಿಗೆ ಒಂದು ಚಮಚ ಕಷಾಯ ಪುಡಿ ಹಾಕಿ ಕುದಿಸಬೇಕು. ಹೆಚ್ಚು ಕುದಿಸಿದರೆ ಕಷಾಯ ಹೆಚ್ಚು ಕಡಕ್ ಆಗುತ್ತದೆ. ಸ್ವಲ್ಪ ಹೆಚ್ಚು ಕುದಿಸಿದರೆ ಒಳ್ಳೆಯದು. ಕುದಿದ ನೀರನ್ನು ಸೋಸಿ ಹಾಗೆಯೇ ಕಷಾಯದ ನೀರನ್ನು ಕುಡಿಯಬಹುದು. ಇಲ್ಲವೇ ಸ್ವಲ್ಪ ನೀರು ಹಾಲಿಗೆ ಕಷಾಯದ ನೀರನ್ನು ಬೆರೆಸಿ ಕುಡಿಯಬಹುದು. ಬೇಕಾದರೆ ಸ್ವಲ್ಪ ಸಕ್ಕರೆ ಹಾಕಿಕೊಳ್ಳಿ. ಮಳೆ ನೋಡುತ್ತಾ ಈ ಕಷಾಯವನ್ನು ಸವಿಯುವುದೇ ಆನಂದ. ದಿನಕ್ಕೆ ಎರಡು ಬಾರಿ ಕಾಫಿ-ಚಹಾ ಬದಲು ಕಷಾಯವನ್ನು ಕುಡಿದರೆ ಆರೋಗ್ಯಕ್ಕೂ ಒಳ್ಳೆಯದು. ಈ ಕಷಾಯ ಮಳೆಗಾಲಕ್ಕೆಂದೇ ಮಾಡಿದರೂ ಇದು ಯಾವ ಕಾಲಕ್ಕೂ ಅನುಕೂಲಕ್ಕೆ ಬರುತ್ತದೆ.

Sunday, April 1, 2012

ಶ್ರೀರಾಮ-ನವಮಿಗೊಂದು ಹನುಮಂತನ ಸ್ಮರಣೆ

ರಾಮಾಯಣದಲ್ಲಿ ಹನುಮಂತನ ಪಾತ್ರ ಬಹಳ ಪ್ರಾಮುಖ್ಯತೆ ಪಡೆದಿದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ ಕೂಡ. ಶ್ರೀ ವಾದಿರಾಜರು ಹಾಡಿನ ಮೂಲಕ ಹನುಮಂತನ ಸ್ತುತಿ ಮಾಡಿ ಹೊಗಳಿದ್ದಾರೆ. ವಾದಿರಾಜರು ಹಾಡುಗಳು ಬಹಳ ವಿಸ್ತಾರವಾಗಿರುತ್ತವೆ. ಅವರ ಹನುಮಂತನ ಈ ಹಾಡು ಕೂಡ ಬಹಳ ವಿಸ್ತಾರವಾಗಿದೆ. ಈ ಹಾಡಿನಲ್ಲಿ ಪದ್ಯದ ಮೂಲಕ ವಾದಿರಾಜರು ಹನುಮಂತನ ಸಾಹಸಗಾಥೆಯನ್ನು ವಿವರಿಸಿದ್ದಾರೆ. ಹನುಮನು ಸಾಗರ ದಾಟಿದ್ದು, ಜಾನಕಿಗೆ ಮುದ್ರಿಕೆ ನೀಡಿ ತದನಂತರ ಲಂಕೆಯ ಸುಟ್ಟು ಮತ್ತೆ ವಾನರ ಸೇನೆಯ ಮೂಲಕ ರಾವಣನನ್ನು ವಧಿಸಿ, ರಾಮನ ಪಟ್ಟಾಭಿಷೇಕದವರೆಗೂ ಈ ಹಾಡಿನಲ್ಲಿ ವಿವರಣೆ ನೀಡಿದ್ದಾರೆ. ಈ ಹಾಡಿನ ಕೇಂದ್ರ ಬಿಂದು ಹನುಮಂತನೇ ಆಗಿದ್ದಾನೆ. ವಾದಿರಾಜರು ಸರಳ ಭಾಷೆಯಲ್ಲಿ ಹನುಮಂತನ ಗುಣಗಾನ ಮಾಡಿದ್ದಾರೆ.

ಸಾಹಿತ್ಯದಷ್ಟೇ ಸೊಗಸಾಗಿ ಶ್ರೀ ವಿದ್ಯಾಭೂಷಣರು ಮಧ್ಯಮಾವತಿ ರಾಗದಲ್ಲಿ ಹಾಡಿದ್ದಾರೆ. ಸಾಹಿತ್ಯಕ್ಕೆ ಅನುಗುಣವಾಗಿ ರಾಗದ ಛಾಯೆಗಳನ್ನು ಅಳವಡಿಸಿಕೊಂಡಿದ್ದಾರೆ. ಸುಮಾರು ೧೭ ನಿಮಿಷದ ಈ ಹಾಡನ್ನು ಕೇಳಿ ಆನಂದಿಸಿ.

ಈ ಹಾಡಿನ ಸಾಹಿತ್ಯ ಹರಿದಾಸ ಸಂಪದದಲ್ಲಿದೆ: http://haridasa.sampada.net/ದಾಸಸಾಹಿತ್ಯ/ಎಷ್ಟು-ಸಾಹಸವಂತ-ನೀನೇ-ಬಲವಂತ/1887

ಹಾಡು ಕೃಪೆ: raaga.com

Yeshtu Sahasavanta

Friday, December 11, 2009

ಕೊನೆಗೂ ಹಳಿಗೆ ಬಂದ ಹಗಲು ರೈಲು



ಹಾಸನ-ಮಂಗಳೂರು ಬ್ರಾಡ್‍ಗೇಜ್ ಆದದ್ದೇ ತಡ, ರೈಲ್ವೇ ಇಲಾಖೆಗೆ ಸುಗ್ಗಿಯೋ ಸುಗ್ಗಿ. ಮೊದಲೇ ಶಿಖರ ಮುಟ್ಟಿದ್ದ ಗಣಿ ವ್ಯವಹಾರ ಅದರ ಪಾಲಿಗೆ ವರವಾಗಿ ಪರಿಣಮಿಸಿತು. ಚಿತ್ರದುರ್ಗ-ಬಳ್ಳಾರಿ ಪ್ರದೇಶಗಳಿಂದ ಮಣ್ಣು ಸಾಗಿಸಿದ್ದೋ ಸಾಗಿಸಿದ್ದು. ಕೋಟಿಗಟ್ಟಲೆ ಲಾಭ ಮಾಡಿದ್ದೇ ಮಾಡಿದ್ದು. ಪ್ರಯಾಣಿಕ ರೈಲಿಗೆ ಮಾತ್ರ ಸುರಕ್ಷತೆಯ ನೆಪ. ದಿನಕ್ಕೆ ೫೦೦೦ಟನ್ ಭಾರವನ್ನು ನಿಭಾಯಿಸುವ ಶಿರಾಡಿ ಘಾಟಿಯ ರೈಲು ಹಳಿಗಳು, ಸಾಧಾರಣ ಪ್ರಯಾಣಿಕ ರೈಲಿನ ಭಾರ ತಡೆಯಲಾರದೇ? ಘಾಟಿಯಲ್ಲಿ ದಿನಕ್ಕೆ ೮ಕ್ಕಿಂತ ಹೆಚ್ಚು ರೈಲು ಓಡಿಸಬಾರದೆಂಬ ರೈಲ್ವೇ ಸುರಕ್ಷತಾ ವಿಭಾಗದ ತಾಕೀತು ಬೇರೆ. ಇನ್ನು ಪ್ರಯಾಣಿಕ ರೈಲನ್ನು ಓಡಿಸಿದರೆ ಕೋಟಿ ಎಣಿಸುವುದು ಗಗನಕುಸುಮ. ಸುಮ್ಮನೆ ಕುಳಿತಿತ್ತು ರೈಲ್ವೇ ಇಲಾಖೆ. ಕಡೆಗೆ ಜನ ಪ್ರತಿನಿಧಿಗಳು ರೈಲು ಬಿಡಲು ಶುರುಮಾಡಿದರೂ ಉಗಿಬಂಡಿ ಹಳಿಗೆ ಮಾತ್ರ ಬರಲಿಲ್ಲ. ಅತ್ತ ಶಿರಾಡಿ ಘಾಟಿ ರಸ್ತೆ ಕೂಡ ಮೃತ್ಯುಕೂಪವಾಗಿರುವ ವಿಷಯ ಎಲ್ಲರಿಗೂ ತಿಳಿದದ್ದೆ. ಈ ವರ್ಷವೂ ಅದೇ ದೃಶ್ಯವನ್ನು ಕಾಣಬಹುದು. ಹೆದ್ದಾರಿ ಇಲಾಖೆಯವರು ಸುಮ್ಮನೆ ಮಳೆಯನ್ನು ದೂರುತ್ತಾರೆ. ಹಲವು ವರ್ಷಗಳಿಂದ ಮಳೆ ಬರುತ್ತಿಲ್ಲವೇ? ಈಗ್ಯಾಕೆ ಮಳೆ ನೆನಪಾಯಿತು? ಟನ್‍ಗಟ್ಟಲೆ ಅದಿರು ತುಂಬಿದ ಲಾರಿಗಳು ಕಾಣಿಸುವುದಿಲ್ಲವೇ? ಇಲಾಖೆಯ ಭ್ರಷ್ಟಾಚಾರದ ಮುಖವನ್ನು ಸ್ವತಃ ರಸ್ತೆಯಲ್ಲೇ ಕಾಣಬಹುದು. ಯಾವುದಾದರೂ ಖಾಸಗಿ ಕಂಪೆನಿಗೆ ಈ ರಸ್ತೆಯನ್ನು ಗುತ್ತಿಗೆ ಕೊಟ್ಟು ಶುಲ್ಕ ಸಂಗ್ರಹ ಮಾಡಬಹುದು. ಅದಕ್ಕೂ ಸಹ ಹೆದ್ದಾರಿ ಇಲಾಖೆಯವರು ತಯಾರಿಲ್ಲ. ಹಲವು ವರ್ಷದಿಂದ ಕುಂಟು ನೆಪಗಳನ್ನು ಹೇಳುತ್ತಾ, ಬಸ್ಸು-ಗಣಿ ಲಾಬಿಗಳಿಗೆ ಮಣಿಯುತ್ತಾ ರೈಲು ಬಿಡುತ್ತಿರುವ ಇಲಾಖೆಗೆ ಬಿಸಿ ಮುಟ್ಟಿಸುವುದು ಹೋರಾಟದ ಮೂಲಕ ಮಾತ್ರ ಸಾಧ್ಯ ಎಂದು ಕರಾವಳಿಯ ಜನ ಅರಿತರು. ಜನರು ಒಗ್ಗಟ್ಟಾಗಿ ಗಲಾಟೆ ಮಾಡಿದರು. ಅದರ ಫಲವಾಗಿ ಡಿಸೆಂಬರ್ ೨೦೦೭ರಲ್ಲಿ ರಾತ್ರಿ ರೈಲು ಹಳಿಗೆ ಬಂತು. ಆದರೇನು ೨೦೦೯ ಬಜ್ಜೆಟ್ಟಿನಲ್ಲಿ ಅದು ಕೇರಳಿಗರ ಪಾಲಾಯಿತು. ಕಷ್ಟದಿಂದ ಲಭಿಸಿದ್ದು ಅನ್ಯರಿಗೆ ಸುಲಭವಾಗಿ ಕೈತಪ್ಪಿಹೋಯಿತು. ಸಧ್ಯಕ್ಕೆ ಇನ್ನೂ ಕೇರಳಕ್ಕೆ ಹೋಗಿಲ್ಲ, ಯಾವಾಗ ಹೋಗುತ್ತದೋ ತಿಳಿದಿಲ್ಲ. ರಾಜಕೀಯ ಲಾಭಕ್ಕಾಗಿ ವಿಸ್ತರಿಸಿದ ರೈಲು ಈಗ ಕೇರಳ ರಾಜ್ಯದವರಿಗೆ ಉಪಯೋಗವಿಲ್ಲವೆನ್ನುತ್ತದೆ ರೈಲ್ವೆ ಇಲಾಖೆ. ಇದರಿಂದಾಗಿ ರೈಲು ವಿಸ್ತರಿಸಲು ಇಲಾಖೆ ಹಿಂದೇಟು ಹಾಕುತ್ತಿದೆ ಎಂಬುದು ಇತ್ತೀಚಿನ ಸುದ್ಧಿ.

ರಾತ್ರಿ ರೈಲು ನಂತರ ಇನ್ನು ೬ತಿಂಗಳಲ್ಲಿ ಹಗಲು ರೈಲು ಬಿಡುವುದಾಗಿ ಇಲಾಖೆ ಹೇಳಿಕೆ ನೀಡಿತು. ಆದರೆ ಅದು ರೈಲು ಎಂದು ಎಲ್ಲರಿಗೂ ಗೊತ್ತಿತ್ತು. ಎರಡು ವರ್ಷದ ನಂತರ ಜನರ ಆಕ್ರೋಶ ಮುಗಿಲು ಮುಟ್ಟುವ ಮೊದಲು ಹಗಲು ರೈಲಿನ ಕನಸು ಕೈಗೂಡಿತು. ಆಗಸ್ಟ್ ೨೯,೨೦೦೯ ರಂದು ರೈಲು ಹಳಿಗೆ ಇಳಿಯಿತು. ವಿಪರ್ಯಾಸವೆಂದರೆ ೨೦೦೫ರ ಬಜ್ಜೆಟ್ಟಿನ ಪ್ರಕಾರ ಇದು ನಿತ್ಯ ಓಡುವ ರೈಲು ಆಗಬೇಕಿತ್ತು ಆದರೆ ಘಾಟಿಯಲ್ಲಿ ಕ್ರಾಸಿಂಗ್ ತೊಂದರೆಯಾಗುವುದರಿಂದ ಇದು ಸಧ್ಯಕ್ಕೆ ವಾರಕ್ಕೆ ಮೂರು ದಿನ ಮಾತ್ರ ಎಂಬುದು ಇಲಾಖೆಯ ಹೇಳಿಕೆ. ಘಾಟಿಯಲ್ಲಿ ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡ ನಂತರವೇ ಪ್ರತಿದಿನ ಓಡಿಸುವುದಾಗಿ ಸಚಿವರು ಬೇರೆ ಹೇಳಿದ್ದಾರೆ. ಇಷ್ಟು ವರ್ಷಗಳಿಂದ ಗೂಡ್ಸ್ ರೈಲು ಸಾಗಣೆಯಿಂದ ಕೋಟ್ಯಂತರ ಲಾಭ ಮಾಡುತ್ತಿರುವ ರೈಲ್ವೆ ಇಲಾಖೆಗೆ ಈಗ ಇದರ ಅರಿವಾಗಿದೆ ಅಂದರೆ ಲಾಭಾಂಶ ಎಲ್ಲಿ ಹೋಯಿತೆನ್ನುವುದು ಇನ್ನೂ ನಿಗೂಢ. ಬಹುಶಃ ಲಾಲೂ ಇದ್ದಾಗ ಎಲ್ಲವೂ ಬಿಹಾರದ ಕಡೆಗೆ ಮುಖ ಮಾಡಿದರೆ ಈಗ ದೀದಿ ಪಶ್ಚಿಮ ಬಂಗಾಳದ ಕಡೆಗೆ ಸಾಗಿಸುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯಕ್ಕೆ ಎಲ್ಲವೂ ಶೂನ್ಯ. ಇರಲಿ ವಿಷಯಕ್ಕೆ ಬರುವ. ಹಗಲು ರೈಲಿನಲ್ಲಿ ಪ್ರಯಾಣಿಸುವುದು ಛಾಯಾಗ್ರಹಕರಿಗೆ, ಪ್ರಕೃತಿ ಪ್ರಿಯರಿಗೆ ಹಬ್ಬವೇ ಸರಿ. ಸುಬ್ರಮಣ್ಯ-ಸಕಲೇಶಪುರ ಘಾಟಿಯಲ್ಲಿ ಪ್ರಕೃತಿ ವೀಕ್ಷಣೆ, ಕುಮಾರಪರ್ವತದ ದಿವ್ಯ ನೋಟ, ಅಲ್ಲಲ್ಲಿ ಕಾಣಿಸುವ ಜಲಪಾತಗಳು, ಸುಮಾರು ೫೫ ಸುರಂಗಗಳು, ಆಳವಾದ ಕಂದಕಗಳು ಪ್ರಯಾಣವನ್ನು ಒಂದು ಮರೆಯಲಾರದ ಅನುಭವವನ್ನು ನೀಡುವುದರಲ್ಲಿ ಸಂದೇಹವಿಲ್ಲ. ಪ್ರಕೃತಿಯನ್ನು ಅತಿ ಹತ್ತಿರದಿಂದ ನೋಡಬಹುದು, ಏಕೆಂದರೆ ೫೫ ಕಿ.ಮೀ ಘಾಟಿ ಮಾರ್ಗದಲ್ಲಿ ರೈಲು ಪ್ರಯಾಣಿಸುವುದು ಕೇವಲ ೧೫ಕಿ.ಮೀ ಪ್ರತಿ ಗಂಟೆ ವೇಗದಲ್ಲಿ. ಪ್ರತಿ ಕಿಲೋಮೀಟರಿಗೂ ಟನೆಲ್ ಇದೆ. ಮಳೆಗಾಲದಲ್ಲಿ ರೈಲು ಕೆಲವೊಮ್ಮೆ ಘಾಟಿ ಮಧ್ಯೆ ನಿಲ್ಲಲೂಬಹುದು. ಒಮ್ಮೆ ಖಂಡಿತವಾಗಿ ಪ್ರಯಾಣಿಸಲೇಬೇಕಾದ ರೈಲಿದು.

[ಮಂಗಳವಾರ, ಗುರುವಾರ, ಶನಿವಾರ]
ಮಂಗಳೂರಿನಿಂದ ಹೊರಡುವ ವೇಳೆ: ಬೆಳಿಗ್ಗೆ ೮:೪೦
ಬೆಂಗಳೂರು ತಲುಪುವ ವೇಳೆ: ಸಂಜೆ ೭:೦೦ (ಯಶವಂತಪುರ ರೈಲು ನಿಲ್ದಾಣ)
[ಸೋಮವಾರ, ಬುಧವಾರ,ಶುಕ್ರವಾರ]
ಬೆಂಗಳೂರಿನಿಂದ ಹೊರಡುವ ವೇಳೆ: ಬೆಳಿಗ್ಗೆ ೭:೩೦ (ಯಶವಂತಪುರ ರೈಲು ನಿಲ್ದಾಣದಿಂದ)
ಮಂಗಳೂರು ತಲುಪುವ ವೇಳೆ: ಸಂಜೆ ೬:೦೦

ದರ:

೧) ಸೆಕಂಡ್ ಸಿಟ್ಟಿಂಗ್ - ೧೧೬ ರುಪಾಯಿ
೨) ೩-ಟೈರ್ ಎ.ಸಿ. - ೫೩೧ ರುಪಾಯಿ
೩) ಸಾಮಾನ್ಯ -

ಸಧ್ಯಕ್ಕೆ ರೈಲಿಗೆ ಮಂಗಳೂರೇ ಕೊನೆ. ಮುಂದಿನ ದಿನ ಈ ರೈಲನ್ನು ಪ್ರತಿದಿನ ಓಡಿಸುವುದಾಗಿಯೂ ಹಾಗೆಯೇ ಕುಂದಾಪುರದವರೆಗೆ ವಿಸ್ತರಿಸುವುದಾಗಿಯೂ ರೈಲ್ವೇ ಸಚಿವರು ಭರವಸೆ ನೀಡಿದ್ದಾರೆ. ಯಾವಾಗ ಕೈಗೂಡುವುದೆಂಬುದು ಇನ್ನೂ ಕೂಡ ನಿಗೂಢವಾಗಿಯೆ ಉಳಿದಿದೆ. ಮತ್ತೆ ಕೇರಳಕ್ಕೆ ಹೋಗದಿದ್ದರೆ ಸಾಕು. ಕೇರಳ ಲಾಬಿ ತಡೆಯಲು ಅದಷ್ಟು ಬೇಗ ಮಂಗಳೂರು ದಕ್ಷಿಣ ರೈಲಿನ ಹಿಡಿತದಿಂದ ಹೊರಗೆ ಬಂದು ನೈರುತ್ಯ ರೈಲ್ವೆ ವಲಯಕ್ಕೆ ಸೇರಬೇಕು. ಇದರಿಂದ ಮಂಗಳೂರಿನಿಂದ ಹೊರಡುವ ನಿರುಪಯೋಗಿ ತಿರುವನಂತಪುರ ರೈಲುಗಳೂ ಕಡಿಮೆಯಾಗುವುದು. ಸುಮಾರು ೧೦ ಗಂಟೆಯ ಪ್ರಯಾಣವಾಗಲಿದೆ. ಇದರಲ್ಲಿ ಮೂರು ಗಂಟೆ ಘಾಟಿ ಪ್ರದೇಶಕ್ಕೆ ಅವಶ್ಯಕ. ಮಳೆಗಾಲದಲ್ಲಿ ಹೇಳಲು ಬಾರದು ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು. ಬೆಂಗಳೂರು-ಕುಣಿಗಲ್-ಹಾಸನ ನೇರ ರೈಲು ಮಾರ್ಗ ಆದಷ್ಟು ಬೇಗ ಪೂರ್ಣಗೊಂಡರೆ ಮಂಗಳೂರನ್ನು ರೈಲಿನಲ್ಲಿ ಕೇವಲ ೮ಗಂಟೆ ಅವಧಿಯಲ್ಲಿ ತಲುಪಬಹುದು. ರೈಲಿನಲ್ಲಿ ಒಟ್ಟು ೨ ಜನರಲ್ ಬೋಗಿಗಳು, ಒಂದು ಎ.ಸಿ ಬೋಗಿ ಮತ್ತು ೯ ಸಿಟ್ಟಿಂಗ್(ರಿಸರ್ವ್‍ಡ್) ಬೋಗಿಗಳಿವೆ. ರೈಲು ಬಂಟ್ವಾಳ, ಕಬಕ-ಪುತ್ತೂರು, ಸುಬ್ರಮಣ್ಯ, ಸಕಲೇಶಪುರ, ಹಾಸನ, ಅರಸೀಕೆರೆ, ತಿಪಟೂರು, ತುಮಕೂರಿನಲ್ಲಿ ನಿಲ್ಲುತ್ತದೆ.

ಕೊನೆ ಹನಿ: ಶಿರಾಡಿ ಘಾಟಿ ಕೊನೆಗೂ ಕಾಂಕ್ರಿಟ್ ಆಗಲಿದೆ. ಆದರೆ ೧೧೫ ಕೋಟಿ ಬಿಡುಗಡೆ ಮಾಡುವೆನೆಂದಿದ್ದ ಕೇಂದ್ರ ಈಗ ಮೊತ್ತವನ್ನು ೧೦೦ ಕೋಟಿಗೆ ಇಳಿಸಿದ್ದಾರೆಂಬ ಸುದ್ಧಿ ಬಂದಿದೆ. ಇದರ ಪರಿಣಾಮವಾಗಿ ದಕ್ಷಿಣ-ಕನ್ನಡದ ಹೆದ್ದಾರಿ ಅಧಿಕಾರಿಗಳು ಟೆಂಡರ್ ಮೊತ್ತ ಹೆಚ್ಚಿಸಲು ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಮುಂದೆ ಏನಾಗುತ್ತೋ ಎಂಬುದು ಕಾಮಗಾರಿ ಪ್ರಾರಂಭವಾದಾಗಲೇ ತಿಳಿಯುವುದು. ಕಾಮಗಾರಿ ಸುಸೂತ್ರವಾಗಿ ನಡೆದರೆ ಮುಂದಿನ ಮಳೆಗಾಲಕ್ಕೆ ಶಿರಾಡಿಯ ಹೆದ್ದಾರಿ ಕಾಂಕ್ರಿಟ್ ರಸ್ತೆಯಾಗುತ್ತದೆ. ಆರು ತಿಂಗಳು ಹೆದ್ದಾರಿ ಬಂದ್. ಕಾಮಗಾರಿಗೆ ಹಣ, ಲಾರಿಗಳು ಮುಖ್ಯವಾಗಿ ಅದಿರು ಲಾರಿಗಳು ಅಡ್ಡಿ ಬರದಿದ್ದರೆ ಸಾಕು.
ಚಿತ್ರ: ನಂದಕುಮಾರ (ಮಂಜು ಮುಸುಕಿದ ಮಳೆಗಾಲದ ಮುಂಜಾನೆಯಲ್ಲಿ ಸುಬ್ರಮಣ್ಯ ರೈಲು ನಿಲ್ದಾಣ)

Printer-Friendly